ಮಡಿಕೇರಿ ವಸತಿ ಶಾಲೆಯಲ್ಲಿ ಅಗ್ನಿ ದುರಂತ: ಓರ್ವ ಸಾವು, 51 ಮಕ್ಕಳನ್ನ ರಕ್ಷಿಸಿದ್ದು ಇವರಿಬ್ಬರು

Share with

ಕೊಡಗು, ಅಕ್ಟೋಬರ್ 09: ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಕಾಟಿಕೇರಿ ಗ್ರಾಮದ ವಸತಿ ಶಾಲೆಯಲ್ಲಿ ದುರಂತ ನಡೆದಿದೆ. ಇಂದು ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಶಾಲಾ ಕಟ್ಟಡದಲ್ಲಿ ಕಂಡು ಬಂದ ಅಗ್ನಿ ಅನಾಹುತದಲ್ಲಿ (Fire disaster) ಓರ್ವ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು (death), ಇಬ್ಬರು ಬಾಲಕರ ಸಮಯಪ್ರಜ್ಞೆಯಿಂದ 51 ಮಕ್ಕಳ ಜೀವ ಉಳಿದಿರುವಂತಹ ಘಟನೆ ನಡೆದಿದೆ. ದುರಂತದಲ್ಲಿ ಭಾಗಮಂಡಲ ಸಮೀಪದ ಚೆಟ್ಟಿ ಮಾನಿ ಗ್ರಾಮದ ಪುಷ್ಪಕ್ ಸಾವನ್ನಪ್ಪಿದ ಬಾಲಕ.

ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಕಾಟಿಕೇರಿ ಗ್ರಾಮದ ವಸತಿ ಶಾಲೆಯಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಅಗ್ನಿ ಅನಾಹುತ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ‌ ಮಡಿಕೇರಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

51 ಮಕ್ಕಳನ್ನ ರಕ್ಷಿಸಿದ ಇಬ್ಬರು ಬಾಲಕರು: ವ್ಯಾಪಕ ಪ್ರಶಂಸೆ
ಘಟನೆ ಸಂದರ್ಭದಲ್ಲಿ ಇಬ್ಬರು ಮಕ್ಕಳು ಸಾಹಸ ಪ್ರದರ್ಶಿಸಿ ಉಳಿದ ಮಕ್ಕಳನ್ನ ರಕ್ಷಿಸಿದ್ದಾರೆ. ಬಬಿನ್ ಮತ್ತು ಯಶ್ವಿನ್ ಎಂಬ ಬಾಲಕರಿಬ್ಬರು ಹೊಗೆಯಿಂದ ಎಚ್ಚೆತ್ತಿದ್ದಾರೆ. ತಕ್ಷಣವೇ ಕಿರುಚಾಡಿ ಎಲ್ಲಾ ಮಕ್ಕಳನ್ನ ಎಬ್ಬಿಸಿ ಬಾಗಿಲಿನತ್ತ ಓಡಿಸಿದ್ದಾರೆ. ಆದರೆ ಬಾಗಿಲು ತೆರೆದುಕೊಂಡಿಲ್ಲ. ಕಿಟಕಿಯ ಗಾಜನ್ನ ಪ್ಲಾಸ್ಕ್ನಿಂದ ಒಡೆಯಲು ಯತ್ನಿಸಿದರೂ ಸಾಧ್ಯವಾಗಿಲ್ಲ. ಹಾಗಾಗಿ ತಕ್ಷಣವೇ ಮತ್ತೊಂದು ಕೋಣೆಗೆ ಓಡಿ ಅಲ್ಲಿ ಕಿಟಗಿ ಬಾಗಿಲು ತೆರೆದು ಉಳಿದ ಮಕ್ಕಳನ್ನ ಹೊರಕ್ಕೆ ದಾಟಿಸಿದ್ದಾರೆ. ಆದರೆ ದುರದೃಷ್ಟವಶಾತ್ ಬಾಲಕ ಪುಷ್ಪಕ್ ಮಾತ್ರ ಹೊರ ಬರಲಾರದೆ ಸಾವನ್ನಪ್ಪಿದ್ದಾನೆ. ಸದ್ಯ ಬಾಲಕರ ಸಮಯಪ್ರಜ್ಞೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.


Share with

Leave a Reply

Your email address will not be published. Required fields are marked *