ಮುಂಬಯಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ‘ಎಕ್ಸ್’ ಖಾತೆಯನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿದ್ದಾರೆ.

ಭಾನುವಾರ (ಸೆ.21) ಬೆಳಗ್ಗೆ ಏಕನಾಥ್ ಶಿಂಧೆ ಅವರ ‘ಎಕ್ಸ್’ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಹ್ಯಾಕರ್‌ಗಳು ಪಾಕಿಸ್ತಾನ ಮತ್ತು ಟರ್ಕಿಯ ಧ್ವಜಗಳಿರುವ ಪೋಸ್ಟ್‌ಗಳನ್ನು ಶಿಂಧೆ ಅವರ ಖಾತೆಯಲ್ಲಿ ಹಾಕಿದ್ದಾರೆ.ಭಾರತ ಪಾಕಿಸ್ತಾನ ನಡುವಿನ ಏಷ್ಯಾಕಪ್ ಪಂದ್ಯಾವಳಿ ದಿನದಂದೇ ಈ ಹ್ಯಾಕ್ ನಡೆದಿದೆ. ಹ್ಯಾಕರ್‌ಗಳು ಎರಡು ಇಸ್ಲಾಮಿಕ್ ರಾಷ್ಟ್ರಗಳ ಫೋಟೋಗಳನ್ನು ಹಾಕಿದ್ದರು.
ಖಾತೆ ಹ್ಯಾಕ್ ಆದ ಬಳಿಕ ಎಚ್ಚೆತ್ತುಕೊಂಡ ಶಿಂಧೆ ಅವರು ಕೂಡಲೇ ಸಂಬಂಧ ಪಟ್ಟವರಿಗೆ ವಿಷಯ ಮುಟ್ಟಿಸಿದ್ದಾರೆ. ಇದಾದ 45 ನಿಮಿಷದಲ್ಲೇ ಖಾತೆಯನ್ನು ಸರಿ ಮಾಡಿಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.
“ನಾವು ತಕ್ಷಣ ಸೈಬರ್ ಅಪರಾಧ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ಉಪ ಮುಖ್ಯಮಂತ್ರಿಯ ಎಕ್ಸ್ ಹ್ಯಾಂಡಲ್‌ನ ಉಸ್ತುವಾರಿ ಹೊಂದಿರುವ ನಮ್ಮ ತಂಡವು ನಂತರ ಖಾತೆಯನ್ನು ಮರುಪಡೆಯಿತು” ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಹಾರಾಷ್ಟ್ರದ ಹಿರಿಯ ಕಾಂಗ್ರೆಸ್ ನಾಯಕ ನಾನಾ ಪಟೋಲ್ ಅವರು ಸೈಬರ್ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಇಂತಹ ಕೃತ್ಯಗಳಿಂದ ಜನರನ್ನು ರಕ್ಷಿಸಲು ರಾಜ್ಯ ಗೃಹ ಇಲಾಖೆ ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.




