ಮಂಗಳೂರು: ಮಂಗಳೂರು ನಗರ ಪೊಲೀಸ್ ಆಯುಕ್ತರ ಹೆಸರಲ್ಲಿ ವ್ಯಕ್ತಿಯೋರ್ವ ವಾಟ್ಸಪ್ ಮೆಸೇಜ್ ಹಾಗೂ ಕರೆ ಮೂಲಕ ತುರ್ತು ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣ ಬೆಳಕಿಗೆ ಬಂದಿದೆ.
ವ್ಯಕ್ತಿಯೋರ್ವ ತನ್ನ ವಾಟ್ಸಪ್ ಪ್ರೊಫೈಲ್ ನಲ್ಲಿ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರ ಪೊಟೋ ಹಾಕಿ ತನ್ನನ್ನು ಪೊಲೀಸ್ ಆಯುಕ್ತನೆಂದು ಪರಿಚಯಿಸಿಕೊಂಡು ತುರ್ತು ಹಣದ ಬೇಡಿಕೆ ಇಟ್ಟಿದಾನೆ. ಪೊಲೀಸ್ ಅಧಿಕಾರಿಗಳು ಸೇರಿದಂತೆ ಆಯುಕ್ತರ ಹಲವು ಮಂದಿ ಪರಿಚಿತರಿಗೆ ಈ ರೀತಿಯ ಸಂದೇಶ ಕಳುಹಿಸಿದ್ದಾನೆ.
“ನಾನು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್. ನಾನು ಆಸ್ಪತ್ರೆಗೆ ದಾಖಲಾಗಿದ್ದು ತುರ್ತು ಹಣ ಬೇಕಾಗಿದೆ. ನನ್ನ ಯುಪಿಐ ವರ್ಕ್ ಮಾಡುತ್ತಿಲ್ಲ. ಅರ್ಜೆಂಟಾಗಿ ಹಣ ಟ್ರಾನ್ಸ್ ಫರ್ ಮಾಡಿ. ಒಂದು ತಾಸಿನೊಳಗೆ ವಾಪಸ್ ಮಾಡುತ್ತೇನೆ” ಎಂದು ಮೆಸೇಜ್ ಮಾಡಿದ್ದು, ಅಲ್ಲದೆ ಕರೆ ಕೂಡ ಮಾಡಿದ್ದಾನೆ.
ಈ ಬಗ್ಗೆ ಪರಿಶೀಲನೆ ನಡೆಸಿದಾಗ ಇದು ವಂಚನೆಯ ಯತ್ನ ಎಂಬುದಾಗಿ ಗೊತ್ತಾಗಿದೆ. ಈ ಕುರಿತು ಪೊಲೀಸ್ ಆಯುಕ್ತರು ಸ್ಪಷ್ಟನೆ ನೀಡಿದ್ದು ಇದೊಂದು ನಕಲಿ ಕರೆಯಾಗಿದ್ದು, ಯಾರು ಕೂಡ ಸ್ಪಂದಿಸಬಾರದು ಎಂದು ತಿಳಿಸಿದ್ದಾರೆ.