ಮಂಗಳೂರು: ಬಗೆ ಬಗೆಯ ಮೀನುಗಳನ್ನು ತಿನ್ನಲು, ಔಷಧ, ಆಯಿಲ್ ಮಾಡಲು ಮಾತ್ರ ಬಳಕೆ ಮಾಡುವುದಲ್ಲ; ಬದಲಾಗಿ ಸುಲಿದು ಬಿಸಾಡುವ ಮೀನುಗಳ ಚರ್ಮವನ್ನು ಬಳಸಿ ಕೀ ಚೈನ್, ಪರ್ಸ್, ಬೆಲ್ಟ್ ಮತ್ತಿತರ ವಿವಿಧ ಮೌಲ್ಯವರ್ಧಿತ ನಿತ್ಯೋಪಯೋಗಿ ವಸ್ತುಗಳನ್ನು ತಯಾರಿಸಬಹುದಾಗಿದೆ.

ಮಂಗಳೂರು ಮೀನುಗಾರಿಕೆ ಕಾಲೇಜಿನ ಮೀನು ಸಂಸ್ಕರಣ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ| ಮಂಜನಾಯ್ಕ ನೇತೃತ್ವದಲ್ಲಿ ಸಂಶೋಧನೆ ನಿರತ ದೇಶದ ವಿವಿಧ ಶಿಕ್ಷಣ ಸಂಸ್ಥೆಗಳ 8 ಮಂದಿ ವಿಜ್ಞಾನಿಗಳ ತಂಡ ನಡೆಸಿದ ಸಂಶೋಧನೆಯಲ್ಲಿ ಇದು ತಿಳಿದುಬಂದಿದೆ.
ಮೀನು ಸಂಸ್ಕರಣ ಉದ್ಯಮದಿಂದ ತಿರಸ್ಕರಿಸಲ್ಪಟ್ಟ ಮೀನಿನ ಚರ್ಮವನ್ನು ಬಳಸಿಕೊಂಡು ಈ ರೀತಿಯ ಉತ್ಪನ್ನ ತಯಾರಿ ಬಗ್ಗೆ ಅವಲೋಕಿಸಿದೆ. ಜತೆಗೆ ಸಮುದ್ರದಲ್ಲಿ ಕಂಡು ಬರುವ ಮಲಬಾರ, ಗ್ರೂಪರ್, ಮೆಲುಗು, ಕೋಬಿಯಾ, ಕ್ಯಾಟ್ ಫಿಶ್ ಮತ್ತು ಸೈನಿಚೀಕ್ ಗ್ರೂಪರ್ ಮೀನುಗಳ ಚರ್ಮವು ನಿತ್ಯೋಪಯೋಗಿ ವಸ್ತುಗಳ ಉತ್ಪಾದನೆಗೆ ಹೆಚ್ಚು ಉಪಯುಕ್ತವಾಗಿದೆ ಎಂದು ವರದಿಯಲ್ಲಿ ನಮೂದಿಸಲಾಗಿದೆ.
ಚರ್ಮದ ಉದ್ಯಮವು ಈ ವರೆಗೂ ಸಾಂಪ್ರದಾಯಿಕವಾಗಿ ಮೊಲ, ಮೊಸಳೆ, ಜಾನುವಾರು, ಒಂಟೆ, ಕುರಿ ಮತ್ತು ಆಡು ಮತ್ತಿತರ ಪ್ರಾಣಿಗಳ ಚರ್ಮವನ್ನು ಅವಲಂಭಿಸಿದೆ. ಹೊಸ ತಂತ್ರಜ್ಞಾನದ ಮೂಲಕ ಮೀನಿನಿಂದ ಗುಣ ಮಟ್ಟದ ಚರ್ಮ ಪಡೆಯಬಹುದು ಮತ್ತು ಆ ಮೂಲಕ ಚರ್ಮದ ಹದಗೊಳಿಸುವ ಪ್ರಕ್ರಿಯೆಯಲ್ಲಿ ಪರಿಸರ ಮಾಲಿನ್ಯವನ್ನು ಗಮನಾರ್ಹವಾಗಿ ಕಡಿಮೆ ಮಾಡಲು ಸಾಧ್ಯವಿದೆ ಎನ್ನುವುದನ್ನು ಸಂಶೋಧಕರ ತಂಡ ಕಂಡುಕೊಂಡಿದೆ.
ಮೀನಿನ ಚರ್ಮವನ್ನು ಉದ್ಯಮದಲ್ಲಿ ಬಳಕೆ ಮಾಡಿದರೆ ಪ್ರಾಣಿಗಳ ಚರ್ಮ ಬಳಕೆಯನ್ನು ಬಹಳಷ್ಟು ಕಡಿಮೆ ಮಾಡಬಹುದು. ಇದರ ಜತೆಗೆ ಗುಡಿ ಕೈಗಾರಿಕೆಗೂ ನೆರವಾಗಬಹುದು ಎನ್ನುವುದು ಸಂಶೋಧಕರ ಅಭಿಪ್ರಾಯವಾಗಿದೆ.




