ಮಂಗಳೂರು: ಸ್ಯಾಂಡಲ್ ವುಡ್ ನ ಕನಸಿನ ರಾಣಿ ಮಾಲಾಶ್ರೀ ಅಭಿನಯದ ‘ಮಾರಕಾಸ್ತ್ರ’ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ ಎಂದು ಚಿತ್ರತಂಡದ ಪರವಾಗಿ ಡಾ. ವಿ. ನಟರಾಜ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಚಿತ್ರಕ್ಕೆ ಮಂಗಳೂರು, ಕಾಸರಗೋಡು ಸೇರಿದಂತೆ ರಾಜ್ಯಾದ್ಯಂತ ಚಿತ್ರೀಕರಣ ನಡೆದಿದ್ದು ಚಿತ್ರದಲ್ಲಿ ಐಟಂ ಸಾಂಗ್ ಸಹಿತ ನಾಲ್ಕು ಹಾಡುಗಳಿವೆ. ಒಂದು ಹಾಡನ್ನು ಮಂಗಳೂರಿನ ಹಾಗೂ ಕಾಸರಗೋಡಿನ ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ.
ಅ. 6 ರಂದು ಸಿನಿಮಾ ವಿಶ್ವಾದ್ಯಂತ ಬಿಡುಗಡೆಯಾಗಲಿದ್ದು, ಈಗಾಗಲೇ ಹಿಂದಿ ರೈಟ್ಸ್ 1.8 ಕೋಟಿ ರೂ.ಗೆ ಮಾರಾಟವಾಗಿದ್ದು ಸೆಟಲೈಟ್ ಹಕ್ಕು 1.25 ಕೋಟಿ ರೂ. ಗೆ ಆಫರ್ ಬಂದಿದೆ ಎಂದು ಮಾಹಿತಿ ನೀಡಿದರು. ನಿರ್ದೇಶಕ ಗುರುಮೂರ್ತಿ ಸುನಾಮಿ ಮಾತನಾಡಿ, ಸಿನಿಮಾದಲ್ಲಿ ಸಮಾಜಕ್ಕೆ ಒಳ್ಳೆಯ ಸಂದೇಶವಿದೆ. ಇದು ನನ್ನ 10 ವರ್ಷಗಳ ಕನಸು. ಸಿನಿಮಾ ನೋಡಿ ಆಶೀರ್ವದಿಸಿ ಎಂದರು.
ಮಾರಕಾಸ್ತ್ರ ಚಿತ್ರದಲ್ಲಿ ಮಾಲಾಶ್ರೀ ಔಟ್ ಅಂಡ್ ಔಟ್ ಅಕ್ಷನ್ ಲುಕ್ ನಲ್ಲಿ ಕಾಣಿಸಿಕೊಂಡಿರುವುದು ಚಿತ್ರ ರಸಿಕರಲ್ಲಿ ನಿರೀಕ್ಷೆಯನ್ನು ಮೂಡಿಸಿದೆ. ಚಿತ್ರದ ನಾಯಕನಾಗಿ ಆನಂದ್ ಆರ್ಯ, ನಾಯಕಿಯಾಗಿ ಹರ್ಷಿಕಾ ಪೂಣಚ್ಚ, ಅಯ್ಯಪ್ಪ ಶರ್ಮಾ, ಮೈಕೋ ನಾಗರಾಜ್, ಉಗ್ರಂ ಮಂಜು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಸುಮಾರು ಹಿರಿಯ, ಕಿರಿಯ ಕಲಾವಿದರು ಕಾಣಿಸಿಕೊಂಡಿದ್ದಾರೆ.
ಚಿತ್ರವನ್ನು ಗುರುಮೂರ್ತಿ ಸುನಾಮಿ ನಿರ್ದೇಶಿಸಿದ್ದಾರೆ. ನೃತ್ಯ ನಿರ್ದೇಶಕ ಮತ್ತು ನಿರ್ದೇಶಕ ರಾಗಿರುವ ಧನುಕುಮಾರ್ ಕ್ರಿಯೇಟಿವ್ ಹೆಡ್ ಆಗಿದ್ದಾರೆ. ಗಾಯನದಲ್ಲಿ ಅತೀವ ಆಸಕ್ತಿ ಹೊಂದಿ, ಸ್ವತ: ಗಾಯಕರಾಗಿರುವ ಡಾ. ನಟರಾಜ ಈ ಚಿತ್ರದಲ್ಲಿ ಹಾಡು ಹಾಡುವುದರೊಂದಿಗೆ ನಟನೆ ಮಾಡಿದ್ದಾರೆ. ಕೋಮಲ ನಟರಾಜ ನಿರ್ಮಾಪಕರಾಗಿದ್ದು ಮಂಜುನಾಥ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ಗುರುಮೂರ್ತಿ ಸುನಾಮಿ, ನಟ ಆನಂದ್ ಆರ್ಯ, ಕ್ರಿಯೇಟಿವ್ ಹೆಡ್ ಧನಕುಮಾರ್, ಮೈಕೋ ಆನಂದ್ ಮತ್ತಿತರರು ಉಪಸ್ಥಿತರಿದ್ದರು.