ಕಾಸರಗೋಡು: ದೇವರ ನಾಡು ಎಂದೇ ಹೆಸರಾಗಿರುವ ಕೇರಳ ರಾಜ್ಯದಲ್ಲಿ ಅದೆಷ್ಟೋ ಪ್ರಸಿದ್ಧಿ ಹೊಂದಿರುವ ದೇವಾಲಯಗಳಿದೆ. ಇದರಲ್ಲಿ ಮಲ್ಲ ದುರ್ಗಾಪರಮೇಶ್ವರಿ ದೇವಾಲಯವೂ ಒಂದಾಗಿದೆ. ತಂತ್ರ ಸಮುಚ್ಛಯದ ಆಧಾರದಲ್ಲಿ ಪ್ರತಿಷ್ಠೆಗೊಂಡಿರುವ ಈ ದೇಗುಲದಲ್ಲಿ ಅಮ್ಮನವರನ್ನು ದುರ್ಗಾಪರಮೇಶ್ವರಿ, ಅನ್ನಪೂರ್ಣೇಶ್ವರಿ, ಭಗವತಿ, ಮಲ್ಲಾಂಬಿಕೆ, ಮಲ್ಲತ್ತಮ್ಮ, ಮಲ್ಲದಪ್ಪೆ ಎಂಬ ಹೆಸರುಗಳಿಂದಲೂ ಕರೆಯುತ್ತಾರೆ.
ಕೇರಳದ ಕಾಸರಗೋಡು ಜಿಲ್ಲೆಯ ಮುಳಿಯಾರು ಗ್ರಾಮದಲ್ಲಿರುವ ‘ಮಲ್ಲ ಕ್ಷೇತ್ರ’ ಮಧುವಾಹಿನಿ ನದಿ ತೀರದಲ್ಲಿ ಪೂರ್ವ ದಿಕ್ಕಿಗೆ ಅಭಿಮುಖವಾಗಿ ನೆಲೆಗೊಂಡಿದೆ.
ಇಲ್ಲಿ ಅಮ್ಮನವರಿಗೆ ನಿತ್ಯವೂ ರಾಜೋಪಚಾರ ಸಪರಿವಾರ ತ್ರಿಕಾಲ ಪೂಜೆ ನಡೆಯುತ್ತದೆ. ಪ್ರಾತಃಕಾಲ ಶಾಂತಿ ದುರ್ಗೆ, ಮಧ್ಯಾಹ್ನ ಸ್ವಯಂವರ ಪಾರ್ವತಿ, ರಾತ್ರಿ ವನದುರ್ಗೆ ಎಂಬ ಸಂಕಲ್ಪದೊಂದಿಗೆ ಪೂಜಿಸಲಾಗುತ್ತದೆ. ಇಲ್ಲಿ ಬರುವ ಭಕ್ತಾದಿಗಳಿಗೆ ಮಧ್ಯಾಹ್ನ ಹಾಗೂ ರಾತ್ರಿಯಲ್ಲಿ ನಿತ್ಯವೂ ಅನ್ನದಾನ ನಡೆದುಕೊಂಡು ಬರುತ್ತಿದೆ. ನಾಡಿನಲ್ಲಿ ದಾರಿದ್ರ ಹಾಗೂ ಒಂದು ಹೊತ್ತಿನ ಊಟಕ್ಕೆ ಕಷ್ಟವಿದ್ದ ಕಾಲದಲ್ಲೂ ಆ ಮಹಾಮಾಯೆಯ ಅನುಗ್ರಹದಿಂದ ಇಲ್ಲಿ ಅನ್ನಪ್ರಸಾದವನ್ನು ಕೊಡುತ್ತಾ ಬರಲಾಗಿದೆ. ಆ ಕಾರಣದಿಂದ ಇಲ್ಲಿ ಅನ್ನದಾನಕ್ಕೆ ತುಂಬಾ ಮಹತ್ವವೂ ಗೌರವವೂ ಇದೆ. ಆದ್ದರಿಂದಲೇ ಅನ್ನವನ್ನು ಅವಹೇಳನ ಮಾಡುವುದು ಹಾಗೂ ವ್ಯರ್ಥಬಮಾಡುವುದನ್ನು ಮಹಾ ಪಾಪವಾಗಿ ಪರಿಗಣಿಸಲಾಗಿದೆ.
ಇತಿಹಾಸ:
1668ನೇ ಕಾಲಘಟ್ಟದಲ್ಲಿ ಚಕ್ರವರ್ತಿ ಛತ್ರಪತಿ ಶಿವಾಜಿಯ ಕಾಲಾನಂತರ ಮೊಘಲರಿಂದ ಹಿಂದುಗಳಿಗೆ ಎದುರಾದ ಆಕ್ರಮಣದಿಂದಾಗಿ ಹಿಂದೂ ಆಚಾರ, ಅನುಷ್ಠಾನಗಳನ್ನು ನಡೆಸಲು ಅಸಾಧ್ಯವಾದಾಗ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಸಾತಾರದ ಕರಾಡ ಎಂಬ ಸ್ಥಳದಿಂದ ಸುಮಾರು ಬ್ರಾಹ್ಮಣರು, ಕ್ಷತ್ರಿಯರು, ನಾಯಕರು ಮೊದಲಾದವರು ಅಲ್ಲಿಂದ ಭಾರತದ ದಕ್ಷಿಣ ಭಾಗಕ್ಕೆ ವಲಸೆ ಬರಬೇಕಾಯಿತು. ಹೀಗೆ ತಮ್ಮ ಆರಾಧನಾ ಶಕ್ತಿಯಾದ ಶ್ರೀ ಚಕ್ರದೊಂದಿಗೆ ಈ ಸ್ಥಳಕ್ಕೆ ಬಂದ ಕರಾಡ ಬ್ರಾಹ್ಮಣರು(ಕರಾಡದಿಂದ ಬಂದವರು) ಮಧುವಾಹಿನಿ ನದಿಯು ಅರ್ಧಚಂದ್ರಾಕಾರ ವಾಗಿ ಹರಿಯುವುದನ್ನು ಕಂಡು ಇದುವೇ ಸೂಕ್ತವಾದ ಸ್ಥಳ ಎಂದು ತೀರ್ಮಾನಿಸಿ ಸ್ಥಳದ ಅಧಿಕಾರಿಗಳಾಗಿದ್ದ ದೈವಭಕ್ತರಾದ ಮುಷ್ಟಿಕರ /ಮಲ್ಲ ಕ್ಷತ್ರಿಯರ(ಮಲ್ಲರ ನಾಡು – ಮಲ್ಲ ಎಂಬ ಹೆಸರು ಬರಲು ಕಾರಣ ) ಅನುಮತಿಯನ್ನು ಪಡೆದುಕೊಂಡು ಎಲ್ಲರ ಸಹಾಯ ಸಹಕಾರದಿಂದ ಸರ್ವ ಸಾನಿಧ್ಯದಿಂದ ಕೂಡಿದ ತಮ್ಮ ಆರಾಧನಾ ಶಕ್ತಿಯನ್ನು ಈ ಸ್ಥಳದಲ್ಲಿ ಪ್ರತಿಷ್ಠಾಪಿಸಿದರು. ಆದ್ದರಿಂದ ಬ್ರಾಹ್ಮಣರ ವಂಶಜರಾದ ಆನೆಮಜಲು ಮನೆತನದವರು ಶ್ರೀ ಕ್ಷೇತ್ರದ ಆಡಳಿತವನ್ನು ಈಗಲೂ ನಡೆಸಿಕೊಂಡು ಬರುತ್ತಿದ್ದಾರೆ.
ಸತ್ಯನಾರಾಯಣ ಸ್ವಾಮಿ:
ಈ ಪುಣ್ಯ ಕ್ಷೇತ್ರದಲ್ಲಿ ನಿತ್ಯವೂ ಸತ್ಯನಾರಾಯಣ ಪೂಜೆ ನೆರವೇರುತ್ತಿದೆ. ಸಾವಿರಾರು ಭಕ್ತಾಧಿಗಳು ತಮ್ಮ ಭಕ್ತಿಯ ಪೂಜೆಯನ್ನು ನೆರವೇರಿಸುತ್ತಿದ್ದಾರೆ. ಇಲ್ಲಿಯ ವಿಶೇಷವೇನೆಂದರೆ ಸತ್ಯನಾರಾಯಣ ದೇವರ ಪ್ರತಿಷ್ಠೆ ಇರುವ, ನಿತ್ಯಪೂಜೆ ನಡೆಯುವ ದೇವಾಲಯ ಬೇರೆಲ್ಲೂ ಕಾಣಲು ಸಿಗದು. 1968ರಲ್ಲಿ ಆಡಳಿತ ಮೊಕ್ತೇಸರರಾದ ಆನೆಮಜಲು ಅಚ್ಯುತ ಭಟ್ಟರು ಉತ್ತರ ಭಾರತ ಯಾತ್ರೆ ಕೈಗೊಂಡ ಸಂದರ್ಭದಲ್ಲಿ ಕಾಶಿಯಿಂದ ಚಂದ್ರಕಾಂತ ಶಿಲೆಯ ಸತ್ಯನಾರಾಯಣ ವಿಗ್ರಹವನ್ನು ತಂದು ಆ ಬಳಿಕ ದೇವಾಲಯದ ತೆಂಕು ಗೋಪುರದ ನೈಋತ್ಯ ಮೂಲೆಯಲ್ಲಿ ಗುಡಿಯನ್ನು ಕಟ್ಟಿಸಿ 1976ರಲ್ಲಿ ಶೃಂಗೇರಿ ಜಗದ್ಗುರು ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳಿಂದ ಪ್ರತಿಷ್ಠಾಪನೆ ಮಾಡಲಾಗಿದೆ.
ನಾಗದೇವತೆ:
ದೇವಾಲಯದ ಉತ್ತರಕ್ಕೆ ಮದುವಾಹಿನಿ ನದಿಯ ತೀರದಲ್ಲಿ ಅಲದಮರದ ಬುಡದಲ್ಲಿ ನಾಗದೇವತೆಯ ಸನ್ನಿಧಿ ಇದೆ. ಇಲ್ಲಿ ನಿತ್ಯವೂ ಬೆಳಗ್ಗೆ ಅಭಿಷೇಕ ಪೂಜೆ ನಡೆಯುತ್ತದೆ.
ದೈವಗಳು:
ದೇವಸ್ಥಾನದ ಒಳಗಡೆ ಉತ್ತರಕ್ಕೆ ಪರಶಿವನ ಉಗ್ರರೂಪದ ಸಂಕೇತವಾಗಿರುವ ಜಟಾಧಾರಿಯ ಸಾನಿಧ್ಯವಿದೆ. ದೇವಿಯ ಪರಿವಾರಕ್ಕೆ ಸೇರಿದ ಧೂಮಾವತಿ ದೈವ ಶ್ರೀ ಕ್ಷೇತ್ರದ ಸ್ಥಳ ದೈವವಾಗಿದೆ. ದೇವಾಲಯದ ಮುಂದಿರುವ ಎಡ ಭಾಗದಲ್ಲಿ ದೈವಸ್ಥಾನ ಕಾಣಬಹುದು. ಪ್ರತಿ ವರ್ಷ ವಾರ್ಷಿಕೋತ್ಸವದ ಸಮಯದಲ್ಲಿ ಆರಾಟಿನ ಮರುದಿನ ದೈವದ ಕೋಲ ನಡೆಯುತ್ತದೆ.
ನಿತ್ಯ ಪೂಜಾ ಸಮಯ:ನಿತ್ಯ ಪೂಜಾ ಸಮಯ:
ಬೆಳಿಗ್ಗೆ 8.00, ಮಧ್ಯಾಹ್ನ 12:15 ಮತ್ತು ರಾತ್ರಿ 8.00 ಗಂಟೆಗೆ ನಿತ್ಯವೂ ಕ್ಷೇತ್ರದಲ್ಲಿ ಪೂಜೆ ನಡೆಯುತ್ತದೆ.
ವಿಶೇಷ ದಿವಸಗಳು:
ವಾರ್ಷಿಕ ಉತ್ಸವ, ಪಾಲ್ಗುಣ ಮಾಸ ಶುದ್ಧ ಏಕಾದಶಿಯಂದು ರಾತ್ರಿ ಧ್ವಜಾರೋಹಣಗೊಳ್ಳುತ್ತದೆ.
ಹುಣ್ಣಿಮೆಯಂದು(ಹೋಳಿ) ರಥೋತ್ಸವ/ಬೆಡಿ, ಮರುದಿನ ಅವಭೃಥ ಸ್ನಾನ- ಬಟ್ಲುಕಾಣಿಕೆ, ದೈವಗಳ ಕೋಲ ನಡೆಯುತ್ತದೆ.
ಮಾರ್ಚ್ 17ರಂದು ಪ್ರಾತಃ ಕಾಲದಲ್ಲಿ ಶ್ರೀ ಸತ್ಯನಾರಾಯಣ ಸ್ವಾಮಿ ಪ್ರತಿಷ್ಠಾ ದಿನವನ್ನಾಗಿ ಪೂಜಿಸಲಾಗುತ್ತದೆ.
ವಸಂತ ಋತುವಿನ ವೈಶಾಖ ಹುಣ್ಣಿಮೆಯಂದು ವಸಂತೋತ್ಸವ ನಡೆಯುತ್ತದೆ.
ಪ್ರತಿಷ್ಠಾ ದಿನ :
ವೃಷಭ ಮಾಸದ ಮೃಗಶಿರ ನಕ್ಷತ್ರದಂದು ಪ್ರತಿಷ್ಠಾ ದಿನ ಆಚರಿಸಲಾಗುತ್ತದೆ.
ಶರನ್ನವರಾತ್ರಿ ಮಹೋತ್ಸವದಲ್ಲಿ ಶಾರದಾ ಪೂಜೆ, ವಾಹನ ಪೂಜೆ: ನವ ಚಂಡಿಕಾಯಾಗ, ವಿಧ್ಯಾರಂಭ; ಶಮಿ ಪೂಜೆ ನಡೆಸಲಾಗುತ್ತದೆ.
ಕಾರ್ತಿಕ ಮಾಸದ ಹುಣ್ಣಿಮೆಯಂದು ಕಾರ್ತಿಕ ಉತ್ಸವ ನಡೆಯುತ್ತದೆ.
ತಿಂಗಳ ಮಂಗಳವಾರ: ಪ್ರತಿ ತಿಂಗಳ ಸಂಕ್ರಾಂತಿಯ ಬಳಿಕ ಬರುವ ಮಂಗಳವಾರ
ಪ್ರತಿ ಹುಣ್ಣಿಮೆಯಂದು ತುಲಾಭಾರ ಸೇವೆ, ಪ್ರತಿ ಬುಧವಾರ – ಅಕ್ಷರಾಭ್ಯಾಸ/ವಿಧ್ಯಾರಂಭ ನಡೆಯುತ್ತದೆ.