ಮಲ್ಪೆ ಬೀಚ್ ಪ್ರವಾಸಿಗರಿಗೆ ಮುಕ್ತ..; ವಾಟರ್ ಸ್ಪೋರ್ಟ್ ಆರಂಭ

Share with

ಮಲ್ಪೆ: ಮಳೆಗಾಲದ ನಿಷೇಧ ಅವಧಿಯ ಬಳಿಕ ಇದೀಗ ಮಲ್ಪೆ ಬೀಚ್ ಮತ್ತೆ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಕಡಲಿಗಿಳಿಯದಂತೆ ಬೀಚ್‌ನ ಉದ್ದಕ್ಕೂ ಹಾಕಲಾಗಿದ್ದ ತಡೆಬೇಲಿಯನ್ನು ತೆರವುಗೊಳಿಸಲಾಗಿದೆ. ಜಲ ಕ್ರೀಡೆಗಳು ಆರಂಭಗೊಂಡಿವೆ.

ಸೋಮವಾರ ಮಲ್ಪೆ ಬೀಚ್‌ನಲ್ಲಿ ವಾಟರ್ ಸ್ಪೋಟ್ಸ್ ಗಳಾದ ಜೆಸ್ಕಿ, ಪ್ಯಾರಸೈಲಿಂಗ್, ಬನಾನ ರೈಡ್, ಬಂಪಿ ರೈಡ್, ಝರ್ಬಿಂಗ್, ಬೋಟ್ ರೌಂಡ್ ಸೇರಿದಂತೆ ಇನ್ನಿತರ ಚಟುವಟಿಕೆಗಳು ಆರಂಭಗೊಂಡಿದೆ. ನವರಾತ್ರಿಯ ಹಿನ್ನೆಲೆಯಲ್ಲಿ ಕಡಲತೀರಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಲಿದೆ. ಬೆಳಗ್ಗಿನಿಂದಲೇ ಕಡಲತೀರಕ್ಕೆ ಬಂದ ಪ್ರವಾಸಿಗರು ಕಡಲಿಗಿಳಿದು ಮಜ ಅನುಭವಿಸಿದರೆ ಇನ್ನು ಕೆಲವರು ಜಲಸಾಹಸ ಕ್ರೀಡೆಯಲ್ಲಿ ತೊಡಗಿ ಖುಷಿ ಪಟ್ಟರು.

ಪ್ರತಿ ವರ್ಷದ ಮುನ್ನೆಚ್ಚರಿಕೆ

ಸಮುದ್ರ ನೋಡಲು ಮಳೆಗಾಲದಲ್ಲೂ ಹೊರರಾಜ್ಯ, ಹೊರಜಿಲ್ಲೆಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಆದರೆ, ಮಳೆಗಾಲದಲ್ಲಿ ತೆರೆಗಳ ಅಬ್ಬರ ಜೋರಾಗಿದ್ದು ಸಮುದ್ರಕ್ಕೆ ಇಳಿಯುವುದು, ನೀರಿನಲ್ಲಿ ಆಟವಾಡುವುದು ಹೆಚ್ಚು ಅಪಾಯಕಾರಿ. ಅಲೆಗಳ ಅಬ್ಬರ ಹೆಚ್ಚಿದ್ದರೂ ಪ್ರವಾಸಿಗರು ಎಚ್ಚರಿಕೆಯ ನಡುವೆಯೂ ನೀರಿಗಿಳಿಯಲು ಮುಂದಾಗುತ್ತಾರೆ. ಈ ಹಿನ್ನೆಲೆಯಲ್ಲಿ ಸಮುದ್ರ ತೀರದತ್ತ ತೆರಳುವ ಪ್ರವಾಸಿಗರಿಗೆ ಮುನ್ನೆಚ್ಚರಿಕೆಗಾಗಿ ಪ್ರತಿ ವರ್ಷ ಕನಿಷ್ಠ 4 ತಿಂಗಳು ಈ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಸಮುದ್ರ ತೀರದಿಂದ ಸುಮಾರು 20 ಅಡಿಗಳಷ್ಟು ದೂರದಲ್ಲಿ ಬೀಚ್‌ನ ಉದ್ದಕ್ಕೂ 10ಅಡಿ ಎತ್ತರದಲ್ಲಿ ಫಿಶ್‌ನೆಟ್ ಬಳಸಿ ತಡೆಬೇಲಿಯನ್ನು ಹಾಕಲಾಗುತ್ತದೆ.

ಮಲ್ಪೆ ಬೀಚನ್ನು ಪ್ರವಾಸಿಗರಿಗೆ ಮುಕ್ತಗೊಳಿಸಲಾಗಿದೆ, ಜಲ ಕ್ರೀಡೆಗೂ ಅವಕಾಶ ನೀಡಲಾಗಿದೆ. ಆದರೆ, ಕಡಲಿನ ಜತೆ ದುಸ್ಸಾಹಸಕ್ಕಿಳಿಯದೆ ಎಲ್ಲರೂ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಮನವಿ ಮಾಡಿದ್ದಾರೆ.


Share with

Leave a Reply

Your email address will not be published. Required fields are marked *