ಉಡುಪಿ: ಮಲ್ಪೆ ಬೀಚ್ ನಲ್ಲಿ ಸ್ನಾನಕ್ಕಿಳಿದ ಯುವಕನೋರ್ವ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ಭಾನುವಾರ ಮಧ್ಯಾಹ್ನ ಸಂಭವಿಸಿದೆ.
ಮೃತರನ್ನು ಮಂಡ್ಯ ಮೂಲದ ನಾಗೇಂದ್ರ (21) ಎಂದು ಗುರುತಿಸಲಾಗಿದೆ. ನಾಗೇಂದ್ರ ಅವರು ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಐದು ಮಂದಿ ಸ್ನೇಹಿತರೊಂದಿಗೆ ಮಲ್ಪೆ ಬೀಚ್ ಗೆ ಪ್ರವಾಸಕ್ಕೆ ಬಂದಿದ್ದರು. ಭಾನುವಾರ ಮಧ್ಯಾಹ್ನ ಸಮುದ್ರಕ್ಕಿಳಿದು ನೀರಿನಲ್ಲಿ ಆಡುತ್ತಿದ್ದ ವೇಳೆ ನಾಗೇಂದ್ರ ಅಲೆಗಳ ಅಬ್ಬರಕ್ಕೆ ಸಿಲುಕಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಕೂಡಲೇ ಮುಳುಗುತಜ್ಞ ಈಶ್ವರ ಮಲ್ಪೆ ತಂಡ ಕಾರ್ಯಾಚರಣೆ ನಡೆಸಿ ನಾಗೇಂದ್ರನನ್ನು ಮೇಲಕ್ಕೆ ಎತ್ತಿದರು. ಬಳಿಕ ತಮ್ಮ ಆ್ಯಂಬುಲೆನ್ಸ್ ನಲ್ಲಿ ಮಣಿಪಾಲ ಆಸ್ಪತ್ರೆಗೆ ಸಾಗಿದರು. ಆದರೆ, ನಾಗೇಂದ್ರ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ