
ಹೊಸದಿಲ್ಲಿ: ಕಳೆದ 14 ತಿಂಗಳ ಅವಧಿಯಲ್ಲಿ 9 ಮಂದಿ ಮಹಿಳೆಯರ ಹತ್ಯೆ ಮಾಡಿದ್ದ ಸರಣಿ ಹಂತಕನನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಉತ್ತರ ಪ್ರದೇಶದ ಬರೇಲಿಯಲ್ಲಿ ಈ ಘಟನೆ ನಡೆದಿದೆ.

ಬಂಧಿತ ವ್ಯಕ್ತಿಯನ್ನು 35 ವರ್ಷದ ಕುಲದೀಪ್ ಗಂಗ್ವಾರ್ ಎಂದು ಗುರುತಿಸಲಾಗಿದೆ. ಒಂಬತ್ತು ಮಧ್ಯವಯಸ್ಕ ಮಹಿಳೆಯರ ಜೀವವನ್ನು ಬಲಿತೆಗೆದುಕೊಂಡ ಕ್ರೂರ ಕೊಲೆಗಳ ಹಿಂದಿನ ಈ ಆರೋಪಿಯು ಮಹಿಳಾ ದ್ವೇಷಿಯಾಗಿದ್ದ ಎಂದು ತಿಳಿದುಬಂದಿದೆ.
ನವಾಬ್ ಗಂಜ್ ನಿವಾಸಿಯಾಗಿದ್ದ ಕುಲದೀಪ್, ಶಾಹಿ-ಶೀಶ್ಗಢ ಪ್ರದೇಶದಲ್ಲಿ ಮಹಿಳೆಯರನ್ನು ಬೇಟೆಯಾಡುತ್ತಿದ್ದ. ಅತ್ಯಂತ ನಾಜೂಕಾಗಿ ಕಾರ್ಯಾಚರಣೆ ಮಾಡುತ್ತಿದ್ದ ಆತ ಮಹಿಳೆಯರ ಕತ್ತು ಹಿಸುಕಿ ಕಬ್ಬಿನ ಗದ್ದೆಗಳಲ್ಲಿ ದೇಹಗಳನ್ನು ಎಸೆಯುತ್ತಿದ್ದನು. ಆರು ಕೊಲೆಗಳಲ್ಲಿ ಆತನ ಕೈವಾಡವನ್ನು ಪೊಲೀಸರು ಖಚಿತಪಡಿಸಿದ್ದಾರೆ. ಅಲ್ಲದೆ ಉಳಿದ ಮೂರರಲ್ಲಿ ಆತನನ್ನು ಶಂಕಿಸಿದ್ದಾರೆ.
ಕುಲ್ದೀಪ್ ತನ್ನ ಜೀವನದ ಘಟನೆಗಳ ಕಾರಣದಿಂದ ಮಹಿಳೆಯರ ಬಗ್ಗೆ ದ್ವೇಷ ಹೊಂದಿದ್ದನು. ತನ್ನ ತಂದೆಯು ತಾಯಿಯನ್ನು ನಿಂದಿಸುವುದನ್ನು ಮತ್ತು ನಂತರ ಹೆಂಡತಿ ತನ್ನಿಂದ ದೂರವಾದ ಕಾರಣದಿಂದ ಮಹಿಳೆಯ ಮೇಲೆ ಕೋಪ ಬೆಳೆಸಿಕೊಂಡಿದ್ದ. ಹೀಗಾಗಿ ಒಬ್ಬಂಟಿಯಾಗಿರುವ ಮಹಿಳೆಯರನ್ನು ಗುರಿಯಾಗಿಸಲು ಅವನನ್ನು ಪ್ರೇರೇಪಿಸಿತು. ಕೊಲ್ಲುವ ಮೊದಲು ಅವರ ಮೇಲೆ ಹಲ್ಲೆ ಮಾಡುತ್ತಿದ್ದ ಎಂದು ವರದಿ ತಿಳಿಸಿದೆ.




