ಪುತ್ತೂರು: ಪುತ್ತೂರಿನಲ್ಲಿ ನಡೆದ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಮೂಲತಃ ಪುತ್ತೂರು ಆರ್ಯಾಪು ಗ್ರಾಮದ ನಿವಾಸಿ, ಪ್ರಸ್ತುತ ಬನ್ನೂರು ಗ್ರಾಮದಲ್ಲಿ ವಾಸವಾಗಿರುವ ಸಂಶುದ್ದೀನ್ ಆಸ್ಗರ್ ಅಲಿ(23) ಎಂದು ಗುರುತಿಸಲಾಗಿದೆ.
ಹಾಸನ ಜಿಲ್ಲೆಯವರಾದ ಸಂತ್ರಸ್ತ ಮಹಿಳೆಯು ನವೆಂಬರ್ 24ರಂದು ರಾತ್ರಿ ಪುತ್ತೂರು ಬಸ್ ನಿಲ್ದಾಣದಲ್ಲಿ ಇದ್ದಾಗ ಆಕೆಗೆ ಮದ್ಯ ಸೇವಿಸಲು ನೀಡಿ, ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದ. ಕೃತ್ಯದ ಬಳಿಕ ಅಲ್ಲೇ ಪಕ್ಕದಲ್ಲೆ ಬಿಟ್ಟು ಹೋಗಿದ್ದ ಎಂದು ಮಹಿಳೆ ಆರೋಪಿಸಿದ್ದರು. ತೀವ್ರ ಅಸ್ವಸ್ಥಗೊಂಡಿದ್ದ ಮಹಿಳೆಯನ್ನು ಪುತ್ತೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈ ಘಟನೆಗೆ ಸಂಬಂಧಿಸಿದಂತೆ ಪುತ್ತೂರು ನಗರ ಠಾಣೆಯಲ್ಲಿ ನವೆಂಬರ್ 25ರಂದು ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿ, ಆರೋಪಿಯನ್ನು ನ.28ರಂದು ಬಂಧಿಸಿದ್ದು, ನ.29ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.