ಲಕ್ನೋ: ದೇಶಾದ್ಯಂತ ಇಂಡಿಗೋ ವಿಮಾನಗಳ ರದ್ದತಿಯಿಂದಾಗಿ ಪ್ರಯಾಣಿಕರಲ್ಲಿ ಆತಂಕ ಮತ್ತು ಗೊಂದಲದ ವಾತಾವರಣ ನಿರ್ಮಾಣವಾಗಿರುವ ನಡುವೆಯೇ, ಲಕ್ಷ್ಮೀ ವಿಮಾನ ನಿಲ್ದಾಣದಲ್ಲಿ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. ಸಂಬಂಧಿಕರ ಕಾರ್ಯಕ್ರಮಕ್ಕೆ ಬೆಂಗಳೂರಿನಿಂದ ಲಕ್ಕೆಗೆ ಬಂದಿದ್ದ ವ್ಯಕ್ತಿಯೊಬ್ಬರು ವಾಪಸ್ಸು ಬೆಂಗಳೂರಿಗೆ ತೆರಳಲು ಸಕಾಲಕ್ಕೆ ವಿಮಾನ ಸಿಗದೆ ಆತಂಕಕ್ಕೆ ಒಳಗಾಗಿ ವಿಮಾನ ನಿಲ್ದಾಣದಲ್ಲೇ ಕುಸಿದು ಬಿದ್ದು ಮೃತಪಟ್ಟಿರುವ ಘಟನೆಯೊಂದು ಬೆಳಕಿಗೆ ಬಂದಿದೆ.

ಮೂಲತಃ ಕಾನ್ಪುರ ನಿವಾಸಿಯಾಗಿರುವ ಅನೂಪ್ ಪಾಂಡೆ ಏಕಾಏಕಿ ತೀವ್ರ ಅಸ್ವಸ್ಥರಾಗಿ ಮೃತಪಟ್ಟಿರುವ ದುರ್ದೈವಿಯಾಗಿದ್ದಾರೆ.
ಬೆಂಗಳೂರಿನಲ್ಲಿ ಖಾಸಗಿ ಪಾನೀಯ ಕಂಪನಿಯಲ್ಲಿ ಫೈನಾನ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದ ಅನೂಪ್ ಪಾಂಡೆ ಪತ್ನಿ ಮಕ್ಕಳ ಜೊತೆ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಕುಟುಂಬ ಸದಸ್ಯರೊಬ್ಬರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ೧೩ನೇ ದಿನದ ಕಾರ್ಯದಲ್ಲಿ ಭಾಗವಹಿಸಲು ಅನೂಪ್ ಕಾನ್ಸುರಕ್ಕೆ ಬಂದಿದ್ದರು ಕಾರ್ಯಕ್ರಮ ಮುಗಿಸಿ ವಾಪಸ್ಸು ಬೆಂಗಳೂರಿಗೆ ತೆರಳಬೇಕಿತ್ತು ಆದರೆ ಇಂಡಿಗೋ ವಿಮಾನಗಳ ರದ್ದತಿಯಿಂದ ಸಮಯಕ್ಕೆ ಸರಿಯಾಗಿ ವಿಮಾನ ಸಿಗದೇ ವಿಮಾನ ನಿಲ್ದಾಣದಲ್ಲೇ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿತ್ತು ಇದರಿಂದ ಆತಂಕಕ್ಕೆ ಒಳಗಾದ ಅನೂಪ್ ಆರೋಗ್ಯದಲ್ಲಿ ಏರುಪೇರಾಗಿ ನಿಲ್ದಾಣದಲ್ಲೇ ಕುಸಿದು ಬಿದ್ದಿದ್ದಾರೆ ಆದರೆ ಆಸ್ಪತ್ರೆ ದಾಖಲಿಸಲು ಸಮಯ ತೆಗೆದುಕೊಂಡಿದ್ದರಿಂದ ಅನೂಪ್ ಆಸ್ಪತ್ರೆ ದಾರಿಯಲ್ಲೇ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.
ಪತ್ನಿ ಮಕ್ಕಳ ಬಗ್ಗೆ ಆತಂಕ:
ವಿಮಾನ ರದ್ದತಿಯಿಂದ ಅನೂಪ್ ಅವರಿಗೆ ಒಂದು ಕಡೆ ಕೆಲಸದ ರಜೆ ಹೆಚ್ಚಾಗಿತ್ತು ಇನ್ನೊಂದೆಡೆ ಕಳೆದ ಐದು ದಿನಗಳಿಂದ ಪತ್ನಿ ಮಕ್ಕಳು ಒಬ್ಬರೇ ಇರಬೇಕಾದ ಸ್ಥಿತಿ ಇದರ ನಡುವೆ ವಿಮಾನಗಳ ರದ್ದತಿ ಇದೆಲ್ಲವೂ ಚಿಂತೆಗೀಡು ಮಾಡಿ ಆರೋಗ್ಯದಲ್ಲೇ ಏರುಪೇರಾಗಿದೆ ಎಂದು ಸಹೋದರ ಹೇಳಿಕೆ ನೀಡಿದ್ದಾರೆ.
ಕುಟುಂಬಸ್ಥರ ಆರೋಪ:
ಲಕ್ಕೋ ವಿಮಾನ ನಿಲ್ದಾಣದಲ್ಲಿ ಅನೂಪ್ ಪಾಂಡೆ ಅವರಿಗೆ ತೀವ್ರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ತಕ್ಷಣ ಅವರನ್ನು ಹತ್ತಿರದ ಲೋಕ ಬಂಧು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅಲ್ಲಿನ ವೈದ್ಯರು ಅವರು ಈಗಾಗಲೇ ಮೃತಪಟ್ಟಿರುವುದಾಗಿ ಹೇಳಿದ್ದಾರೆ. ಘಟನೆ ಕುರಿತು ಆಕ್ರೋಶ ಹೊರ ಹಾಕಿದ ಕುಟುಂಬಸ್ಥರು “ಒಂದು ವೇಳೆ ವಿಮಾನ ನಿಲ್ದಾಣದಲ್ಲೇ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಕ್ಕಿದ್ದರೆ ಅನೂಪ್ ಪಾಂಡೆ ಅವರ ಜೀವ ಉಳಿಯುತ್ತಿತ್ತು,” ಎಂದು ಹೇಳಿದ್ದಾರೆ.
ಸದ್ಯ ಪ್ರಕರಣದ ದಾಖಲಿಸಿಕೊಂಡ ಪೊಲೀಸರು ಮೃತರ ಮರಣೋತ್ತರ ಪರೀಕ್ಷೆ ನಡೆಸಿ ನಂತರ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ.




