ಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಲಿ.ಗೆ ಮಂಜುನಾಥ ಖಾರ್ವಿ ಅವರು ನೀಡಿದ ಮೂರು ಚೆಕ್‌ಗಳು ಬೌನ್ಸ್ ಆಗಿದ್ದರಿಂದ ಒಟ್ಟು 88 ಲಕ್ಷ ರೂಪಾಯಿ ಪಾವತಿಸುವಂತೆ ನ್ಯಾಯಾಲಯವು ಸೂಚಿಸಿತ್ತು. ಆದರೆ ಮಂಜುನಾಥ್ ಖಾರ್ವಿ ಅವರು ಹಣ ಮರುಪಾವತಿ ಮಾಡಿರಲಿಲ್ಲ, ಅದರಿಂದ ಅವರ ವಿರುದ್ಧ ವಾರಂಟ್ ಜಾರಿ ಆಗಿದ್ದರಿಂದ ಕುಂದಾಪುರ ಪೊಲೀಸರು ಮಂಜುನಾಥ್ ಖಾರ್ವಿ ಅವರನ್ನು ಬಂಧಿಸಿ 5ನೇ ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಸೆಪ್ಟೆಂಬರ್ 20 ರಂದು ಹಾಜರುಪಡಿಸಿದ್ದು, ನ್ಯಾಯಾಧೀಶರು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಲಿಮಿಟೆಡ್ ಸಂಸ್ಥೆಯಿಂದ ಮಂಜುನಾಥ ಖಾರ್ವಿ ಅವರು ಮೀನು ಖರೀದಿಸಿದ್ದರು ಹಾಗೂ ಮೀನು ಮಾರಾಟವಾದ ಕಮಿಷನ್ ಹಣವನ್ನು ಇರಿಸಿದ್ದು, ಮೂರು ಚೆಕ್‌ಗಳನ್ನು ಮಂಜುನಾಥ ಖಾರ್ವಿ ಅವರು ಫೆಡರೇಶನ್‌ಗೆ ನೀಡಿದ್ದರು. ಆ ಚೆಕ್‌ಗಳನ್ನು ಬ್ಯಾಂಕ್‌ಗೆ ಹಾಕಿದಾಗ ಖಾತೆಯಲ್ಲಿ ಹಣವಿಲ್ಲದೆ ಅಮಾನತುಗೊಂಡಿದ್ದವು. ಇದಕ್ಕೆ ಸಂಬಂಧಿಸಿ ನೋಟಿಸ್ ನೀಡಿದ್ದರೂ ಕೂಡ ಬಾಕಿ ಮೊತ್ತ ಪಾವತಿಸಿರಲಿಲ್ಲ. ಈ ಕುರಿತಂತೆ ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಲಾಗಿದ್ದು, ಅವರ ಮೇಲೆ ಮೂರು ಪ್ರಕರಣಗಳು ದಾಖಲಾಗಿತ್ತು.