ಸಂಸತ್ ಭವನದಲ್ಲಿ ಭಾಷಣ ಮಾಡಿದ ಮಂಗಳೂರಿನ ಯುವ ಪ್ರತಿಭೆ ಸೌರವ್ ಸಾಲ್ಯಾನ್

Share with

ಸಂಸತ್ ಭವನದಲ್ಲಿ ಭಾಷಣ ಆಯ್ಕೆಯಾಗಿದ್ದ ಪ್ರತಿಭೆ ಸೌರವ್ ಸಾಲ್ಯಾನ್ ಅವರು ಪ್ರೆಸ್ ಕ್ಲಬ್ ನಲ್ಲಿ ಸಂಸತ್ ಭವನದಲ್ಲಿನ ತಮ್ಮ ಅನುಭವವನ್ನು ಹಂಚಿಕೊಂಡರು.

ಮಂಗಳೂರು: ಗಾಂಧೀ ಜಯಂತಿ ಪ್ರಯುಕ್ತ ದೆಹಲಿಯ ಸಂಸತ್ ಭವನದಲ್ಲಿ ಭಾಷಣ ಮಾಡಲು ರಾಜ್ಯದಿಂದ ಆಯ್ಕೆಯಾಗಿದ್ದ ಮಂಗಳೂರಿನ ಯುವ ಪ್ರತಿಭೆ ಸೌರವ್ ಸಾಲ್ಯಾನ್ ಅವರು ಪ್ರೆಸ್ ಕ್ಲಬ್ ನಲ್ಲಿ ಗುರುವಾರ ದೆಹಲಿ ಸಂಸತ್ ಭವನದಲ್ಲಿನ ತಮ್ಮ ಅನುಭವವನ್ನು ಹಂಚಿಕೊಂಡರು. ಕೆನರಾ ಕಾಲೇಜಿನ ವಿದ್ಯಾರ್ಥಿಯಾದ ಇವರು ಕರ್ನಾಟಕ ಕಲಾಶ್ರೀ, ರಾಜ್ಯೋತ್ಸವ ಸಾಧಕ ಪುರಸ್ಕಾರ, ಕರ್ನಾಟಕ ಪ್ರತಿಭಾ ರತ್ನ ಮುಂತಾದ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಪ್ರೆಸ್ ಕ್ಲಬ್ ನಲ್ಲಿ ಗುರುವಾರ ದೆಹಲಿ ಸಂಸತ್ ಭವನದಲ್ಲಿನ ತಮ್ಮ ಅನುಭವ ಹಂಚಿಕೊಂಡ ಸೌರವ್ ಅವರು ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ಜೀವನ ಪಾಠದ ಬಗ್ಗೆ ಮಾತುಗಳನ್ನು ಆಡಿದ್ದಾಗಿ ಹೇಳಿದರು. ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾಗುವ ಬಗ್ಗೆ ಧೈರ್ಯ ಇತ್ತಾದರೂ ರಾಜ್ಯ ಮಟ್ಟದಿಂದ ಆಯ್ಕೆಯಾಗಿ ಸಂಸತ್ ಭವನಕ್ಕೆ ಹೋಗಲು ಅವಕಾಶ ಪಡೆಯುವ ಬಗ್ಗೆ ಕಿಂಚಿತ್ತೂ ವಿಶ್ವಾಸವಿರಲಿಲ್ಲ. ಆದರೆ ಅಂತಹ ಅವಕಾಶಕ್ಕೆ ನನ್ನ ಅಜ್ಜಿಯ ಪ್ರೇರಣೆಯೇ ಪ್ರಮುಖ ಕಾರಣ ಎಂದು ಹೇಳಿದರು.

ಜೀವನದಲ್ಲಿ ಮೊದಲ ಬಾರಿಗೆ ದೆಹಲಿಯ ಸಂಸತ್ ಗೆ ವಿಮಾನದಲ್ಲಿ ಹೋಗುವ ಅವಕಾಶ ದೊರೆಯಿತು. ಅಲ್ಲಿ ಅತ್ಯುತ್ತಮ ವ್ಯವಸ್ಥೆಯಡಿ ತಂಗುವ ವ್ಯವಸ್ಥೆಯೂ ದೊರಕಿತ್ತು. ಹೊಸ ಸಂಸತ್‌ ಭವನ ವೀಕ್ಷಣೆಯ ಸದವಕಾಶವು ಲಭಿಸಿತು. ನನ್ನ ತಾಯಿ, ತಾಯಿ ಸ್ನೇಹಿತೆ ಹಾಗೂ ನನ್ನ ಗೆಳೆಯನೊಂದಿಗೆ ದೆಹಲಿಗೆ ಹೋಗಿದ್ದೆ. ಈ ಸಾಧನೆಗೆ ಪೋಷಕರು ಹಾಗೂ ಅಧ್ಯಾಪಕರು ನೀಡಿದ ಪ್ರೋತ್ಸಾಹ ಕಾರಣವಾಗಿದೆ.

ಆಂಗ್ಲ ಭಾಷೆಯ ಉಪನ್ಯಾಸಕನಾಗಬೇಕೆಂಬುದು ನನ್ನ ಕನಸು. ಆಂಗ್ಲ ಭಾಷೆಯ ಟ್ಯೂಶನ್ ನೀಡುತ್ತಾ ನನ್ನ ಶಿಕ್ಷಣ ಪಡೆಯುತ್ತಿದ್ದೇನೆ. ಉಪನ್ಯಾಸಕನಾಗುವ ಕನಸಿನ ಜತೆಗೆ ಬರಹಗಾರನಾಗಬೇಕೆಂಬ ಇರಾದೆಯೂ ಇದೆ ಎಂದು ಸೌರವ್ ಹೇಳಿದರು.

ಸೌರವ್‌ ಅವರು ದಡ್ಡಲ್‌ಕಾಡ್‌ನ‌ ದಿ|ಸುಧೀರ್‌ ಕರ್ಕೇರ ಹಾಗೂ ಪುಷ್ಪಾವತಿ ದಂಪತಿಯ ಪುತ್ರನಾಗಿದ್ದಾರೆ. ನೆಹರೂ ಯುವ ಕೇಂದ್ರದ ಜಗದೀಶ್ ಕೆ., ಕೆನರಾ ಕಾಲೇಜು ಪ್ರಾಂಶುಪಾಲರಾದ ಡಾ|ಪ್ರೇಮಲತಾ ವಿ., ಆಡಳಿತಾಧಿಕಾರಿ ಡಾ|ದೀಪ್ತಿ ನಾಯಕ್, ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಸೀಮಾ ಪ್ರಭು, ಸೌರವ್ ತಾಯಿ ಪುಷ್ಪವತಿ ಮತ್ತು ಪ್ರಿಯಾ ಸುದೇಶ್ ಉಪಸ್ಥಿತರಿದ್ದರು.


Share with

Leave a Reply

Your email address will not be published. Required fields are marked *