ಮಂಗಳೂರು: ಮತ ಚಲಾವಣೆಗೆ ಮತಗಟ್ಟೆಗೆ ಬರುವ ಮತದಾರರು ಮೊಬೈಲ್ ಪೋನ್ ಅನ್ನು ತರುವಂತಿಲ್ಲ ಎಂದು ದ.ಕ.ಜಿಲ್ಲಾ ಚುನಾವಣಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.
ದ.ಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಹಿತಿ ನೀಡಿದ ಅವರು, ಚುನಾವಣಾ ಆಯೋಗದ ನಿಯಮದಂತೆ ಮತದಾರರು ಮತ ಚಲಾಯಿಸಲು ಬರುವಾಗ ಮೊಬೈಲ್ ಪೋನ್ ತರುವಂತಿಲ್ಲ. ಮೊಬೈಲ್ ನೊಂದಿಗೆ ಮತಗಟ್ಟೆಯೊಳಗೆ ಪ್ರವೇಶಿಸಲು ಅವಕಾಶ ನೀಡಲಾಗುವುದಿಲ್ಲ. ಒಂದು ವೇಳೆ ಮೊಬೈಲ್ ತಂದಲ್ಲಿ ಅದನ್ನು ಸೇಫ್ ಡೆಪಾಸಿಟ್ ಮಾಡಲು ವ್ಯವಸ್ಥೆ ಮಾಡಲಾಗುವುದು. ಆದರೆ ಮತ್ತೊಂದು ಸರತಿ ಸಾಲು ಆಗುವ ಬದಲು ಮತದಾರರು ಮೊಬೈಲ್ ಅನ್ನು ಮನೆಯಲ್ಲಿಯೇ ಬಿಟ್ಟು ಬರುವುದು ಉತ್ತಮ ಎಂದು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಬಹಿಷ್ಕಾರವಿಲ್ಲ. ಕೆಲವೆಡೆ ಚುನಾವಣಾ ಬಹಿಷ್ಕಾರಕ್ಕೆ ಕರೆ ಕೊಡಲಾಗಿತ್ತು. ಅಲ್ಲಿಗೆ ಹೋಗಿ ಪರಿಶೀಲಿಸಿದಾಗ ರಸ್ತೆ ಮೊದಲಾದ ಮೂಲಭೂತ ಸೌಕರ್ಯಕ್ಕೆ ಆಗ್ರಹಿಸಿ ಚುನಾವಣಾ ಬಹಿಷ್ಕಾರಕ್ಕೆ ಕರೆ ನೀಡಲಾಗಿತ್ತು. ಅವರನ್ನು ಮನವೊಲಿಸಿ ಚುನಾವಣಾ ಬಹಿಷ್ಕಾರ ಕರೆಯನ್ನು ವಾಪಾಸು ಪಡೆಯಲಾಗಿದ್ದು, ಸದ್ಯ ಯಾವುದೇ ಚುನಾವಣಾ ಬಹಿಷ್ಕಾರ ಇಲ್ಲ ಎಂದು ತಿಳಿಸಿದರು.
ಜಿಲ್ಲೆಯಾದ್ಯಂತ 1,876 ಮತಗಟ್ಟೆಗಳಿದ್ದು, 524 ಸರ್ವಿಸ್ ವೋಟರ್ಗಳು ಸೇರಿದಂತೆ ಒಟ್ಟು 18,18,127 ಮಂದಿ ಮತದಾರರಿದ್ದಾರೆ. 2,251 ಪ್ರಿಸೈಡಿಂಗ್ ಅಧಿಕಾರಿಗಳು, 2,251 ಎಪಿಆರ್‌ಓಗಳು, 4,502 ಪಿಓಗಳು, 2,251 ಗ್ರೂಪ್ ಡಿ ನೌಕರರು ಸೇರಿದಂತೆ ಒಟ್ಟಾರೆ 11,255 ಅಧಿಕಾರಿ, ಸಿಬ್ಬಂದಿ ಈ ಚುನಾವಣೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಏಪ್ರಿಲ್ 26ರ ಬೆಳಗ್ಗೆ 7 ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದ್ದು, ಈಗಾಗಲೇ ಮನೆ ಮನೆಗೆ ವೋಟರ್ ಸ್ಲಿಪ್ ಅನ್ನು ವಿತರಿಸಲಾಗಿದೆ. ಅದರೊಂದಿಗೆ ಮತದಾರರು ಮತದಾನ ಮಾಡಲು ಮತದಾರರ ಪಟ್ಟಿಯಲ್ಲಿ ಹೆಸರು ಇದ್ದು, ಮತದಾರರು ಎಪಿಕ್ ಕಾರ್ಡ್ ತೋರಿಸಿ ಮತದಾನ ಮಾಡಬಹುದು ಹಾಗೂ ಎಪಿಕ್ ಕಾರ್ಡ್ ಹೊರತುಪಡಿಸಿ ಕೇಂದ್ರ ಚುನಾವಣಾ ಆಯೋಗವು ನಿಗದಿಪಡಿಸಿರುವ ಆಧಾರ್ ಕಾರ್ಡ್, ಎಂಜಿ ನರೇಗಾ ಜಾಬ್ ಕಾರ್ಡ್, ಬ್ಯಾಂಕ್ ಅಥವಾ ಅಂಚೆ ಕಚೇರಿಯ ಪಾಸ್ ಬುಕ್, ಅಂಚೆ ವಿಮೆ, ಚಾಲನ ಪರವಾನಗಿ, ಪಾನ್ ಕಾರ್ಡ್, ಆರ್ಜಿಐ ನೀಡಿರುವ ಸ್ಮಾರ್ಟ್ ಕಾರ್ಡ್, ಪಾಸ್ಪೋರ್ಟ್, ಪಿಂಚಣಿ ದಾಖಲಾತಿ, ಕೇಂದ್ರ ಅಥವಾ ರಾಜ್ಯ ಸರ್ಕಾರದ ಸೇವಾ ಗುರುತಿನ ಚೀಟಿ, ಎಂಪಿ, ಎಂಎಲ್ಎ, ಎಂಎಲ್ಸಿ ಅವರಿಗೆ ವಿತರಿಸಲಾಗಿರುವ ಅಧಿಕೃತ ಗುರುತಿನ ಚೀಟಿಗಳು, ಯುನಿಕ್ ಡಿಸಬೆಲಿಟಿ ಐಡಿ ಕಾರ್ಡ್ ತೋರಿಸಿ ಮತ ಚಲಾಯಿಸಬಹುದಾಗಿದೆ ಎಂದು ತಿಳಿಸಿದರು.
ಪ್ರತಿ ವಿಧಾನಸಭಾ ಕ್ಷೇತ್ರವಾರು ಮತಗಟ್ಟೆ ಕಾರ್ಯ ಪೂರ್ಣಗೊಂಡು ಡಿ ಮಾಸ್ಟರಿಂಗ್ ಕಾರ್ಯ ಪೂರ್ಣಗೊಂಡ ನಂತರ ಡಿ ಮಾಸ್ಟರಿಂಗ್ ಕೇಂದ್ರಗಳಿಂದ ಇವಿಎಂ, ವಿವಿಪ್ಯಾಟ್ ಮತ್ತು ದಾಖಲೆಗಳನ್ನು ಮತ ಎಣಿಕೆ ಕೇಂದ್ರವಾದ ಸುರತ್ಕಲ್ ಎನ್ಐಟಿಕೆಯಲ್ಲಿ ದಾಸ್ತಾನು ಇರಿಸಲಾಗುವುದು ಎಂದು ಅವರು ಹೇಳಿದರು.
ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ವಾಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸಿ.ಬಿ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಪ್ರೊಬೇಷನರಿ ಐಎಎಸ್ ಅಧಿಕಾರಿ ಮುಕುಲ್ ಜೈನ್, ಅಪರ ಜಿಲ್ಲಾಧಿಕಾರಿ ಸಂತೋಷ್ ಕುಮಾರ್ ಉಪಸ್ಥಿತರಿದ್ದರು.