ಮಂಜೇಶ್ವರ: ಚೇವಾರ್- ನಂದಾರ್ ಪದವು ಮಲೆನಾಡು ಹೆದ್ದಾರಿಯಲ್ಲಿ ಅಳವಡಿಸಲಾಗಿದ್ದ ಸೋಲಾರ್ ಬೀದಿ ದೀಪಗಳ ಸುಮಾರು ರೂ.11 ಲಕ್ಷ ಮೌಲ್ಯದ 110ಕ್ಕೂ ಮಿಕ್ಕಿದ ಬ್ಯಾಟರಿಗಳನ್ನು ಕಳವುಗೈಯ್ಯಲಾಗಿದ್ದು ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಜಿ.ಪಂ.ಮಾಜೀ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಆಗ್ರಹಿಸಿದ್ದಾರೆ.
ಮಲೆನಾಡು ಹೆದ್ದಾರಿಯ ಮೊದಲ ಹಂತವಾದ ಚೇವಾರು- ನಂದಾರಪದವು ರಸ್ತೆಯ ಕಾಮಗಾರಿ 2021ರಲ್ಲಿ ಪೂರ್ಣಗೊಂಡಿದ್ದು, ಈ ಸಂದರ್ಭದಲ್ಲಿ ರಸ್ತೆಯ ಎರಡೂ ಬದಿಗಳಲ್ಲಿ 400ಕ್ಕೂ ಮಿಕ್ಕಿದ ಸೋಲಾರ್ ಬೀದಿ ದೀಪಗಳನ್ನು ಅಳವಡಿಸಲಾಗಿತ್ತು. ಆ ಬಳಿಕ ಬೀದಿ ದೀಪಗಳು ಒಂದೊಂದರಂತೆ ನಂದಿ ಹೋಗಿದ್ದು, ಇದನ್ನು ದುರಸ್ತಿ ಮಾಡುವಂತೆ ಹಲವು ಬಾರಿ ನಾಗರಿಕರು ಅಧಿಕೃತರಲ್ಲಿ ಭಿನ್ನವಿಸಿದರೂ ಯಾವುದೇ ಫಲ ಕಂಡಿರಲಿಲ್ಲ.
ಈ ನಡುವೆ ಪ್ರಸ್ತುತ ಸೋಲಾರ್ ದೀಪಗಳ ಬ್ಯಾಟರಿಗಳನ್ನು ಕಳವುಗೈದಿರುವ ಬಗ್ಗೆ ಸ್ಥಳೀಯ ನಾಗರಿಕರು ಪಿಡಬ್ಲ್ಯೂಡಿ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಈ ಮಾಹಿತಿಯನ್ನು ಗುತ್ತಿಗೆದಾರರಿಗೆ ಅಧಿಕಾರಿಗಳು ನೀಡಿದ್ದು, ಗುತ್ತಿಗೆ ವಹಿಸಿಕೊಂಡಿದ್ದ ಕಂಪೆನಿಯ ಇಂಜಿನಿಯರ್ ಗಳು ಈ ಬಗ್ಗೆ ಮಂಜೇಶ್ವರ ಪೊಲೀಸರಿಗೆ ದೂರು ನೀಡಿ ತಿಂಗಳುಗಳೇ ಕಳೆದರೂ ಯಾವುದೇ ತನಿಖೆ ನಡೆದಿಲ್ಲವೆಂದು ತಿಳಿದುಬಂದಿದೆ.
ಈ ಕುರಿತು ರಸ್ತೆ ನಿರ್ಮಿಸಿದ ಕೇರಳ ರಸ್ತೆ ನಿಧಿ ಪ್ರಾಧಿಕಾರ(KRFB)ಕ್ಕೆ ಜಿ.ಪಂ. ಮಾಜಿ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಮಾಹಿತಿ ನೀಡಿದ್ದು, ಅಧಿಕೃತರು ಸ್ಥಳಕ್ಕೆ ತೆರಳಿ ಪರಿಶೋಧಿಸಿದಾಗ 110ಕ್ಕೂ ಮಿಕ್ಕಿದ ಬ್ಯಾಟರಿಗಳು ಕಳ್ಳತನವಾಗಿರುವುದು ಅರಿವಿಗೆ ಬಂದಿದೆ. ಪ್ರತಿಯೊಂದು ಬ್ಯಾಟರಿ ತಲಾ ಸುಮಾರು 10ಸಾ.ರೂ.ಮೌಲ್ಯದ್ದಾಗಿದ್ದು, ಕಳವಾದ ಬ್ಯಾಟರಿಗಳ ಮೌಲ್ಯ ರೂ.11 ಲಕ್ಷಕ್ಕೂ ಮಿಕ್ಕಿದ್ದಾಗಿದೆ.
ಪ್ರಸ್ತುತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಕೂಡಲೇ ಸಮಗ್ರ ತನಿಖೆ ನಡೆಸುವಂತೆ ಹರ್ಷಾದ್ ವರ್ಕಾಡಿ ಆಗ್ರಹಿಸಿದ್ದಾರೆ.