ಬೆಂಗಳೂರು: ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಕರ್ನಾಟಕದ ಕ್ಯಾಪ್ಟನ್ ಪ್ರಾಂಜಲ್ ಅವರ ಪಾರ್ಥಿವ ಶರೀರವು ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ತಲುಪಿತು.
ವಿಮಾನ ನಿಲ್ದಾಣದಲ್ಲಿ ಕ್ಯಾಪ್ಟನ್ ಪ್ರಾಂಜಲ್ ಅವರ ಪತ್ನಿ, ತಂದೆ-ತಾಯಿ ಪಾರ್ಥೀವ ಶರೀರವನ್ನು ಬರಮಾಡಿಕೊಂಡರು. ಬಳಿಕ ಸೇನಾಧಿಕಾರಿಗಳು ಕ್ಯಾಪ್ಟನ್ ಪ್ರಾಂಜಲ್ ಅವರ ಪಾರ್ಥೀವ ಶರೀರಕ್ಕೆ ಗೌರವ ವಂದನೆ ಸಲ್ಲಿಸಿದರು. ವಿಮಾನ ನಿಲ್ದಾಣಕ್ಕೆ ಕ್ಯಾಪ್ಟನ್ ಪ್ರಾಂಜಲ್ ಅವರ ಪಾರ್ಥೀವ ಶರೀರ ತಲುಪುತ್ತಿದ್ದಂತೆಯೇ ಸಿಎಂ ಸಿದ್ದರಾಮಯ್ಯ, ಇಂಧನ ಸಚಿವ ಕೆ.ಜೆ ಜಾರ್ಜ್, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಸಂಸದ ತೇಜಸ್ವಿ ಸೂರ್ಯ ಅವರು ಆಗಮಿಸಿ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.
ಪ್ರಾಂಜಲ್ ಅವರ ಪಾರ್ಥಿವ ಶರೀರವನ್ನು ಅವರ ನಿವಾಸಕ್ಕೆ ಕೊಂಡೊಯ್ಯಲಾಗುವುದು. ನ.25ರಂದು ಬೆಳಗ್ಗೆ ಪುಷ್ಪ ನಮನ ಮತ್ತು ಸೇನಾ ಗೌರವದ ನಂತರ ಅಂತಿಮ ವಿಧಿ ವಿಧಾನಗಳು ನಡೆಯಲಿವೆ ಎಂದು ಸೇನಾ ಮೂಲಗಳು ತಿಳಿಸಿವೆ.
ಮಂಗಳೂರಿನಲ್ಲಿ ಎಂಆರ್‌ಪಿಎಲ್ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಎಂ.ವೆಂಕಟೇಶ್ ಹಾಗೂ ಅನುರಾಧ ದಂಪತಿ ಅವರ ಪುತ್ರರಾಗಿರುವ ಕ್ಯಾಪ್ಟನ್ ಪ್ರಾಂಜಲ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್‌ನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪಡೆದಿದ್ದರು.