ಮಾಣಿಲ ಶ್ರೀಧಾಮ ಶ್ರೀದುರ್ಗಾಮಹಾಲಕ್ಷ್ಮೀ ಕ್ಷೇತ್ರದಲ್ಲಿ  ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆ

Share with

ವಿಟ್ಲ: ಮಾಣಿಲ ಶ್ರೀಧಾಮ ಶ್ರೀದುರ್ಗಾಮಹಾಲಕ್ಷ್ಮೀ ಕ್ಷೇತ್ರದಲ್ಲಿ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜಾ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆಯ ಬೆಳ್ಳಿಹಬ್ಬ ಮಹೋತ್ಸವದ ಸಮಾರೋಪದ ಅಂಗವಾಗಿ ೪೮ ದಿನಗಳ ಕಾಲ ನಡೆಯುವ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜಾ ಕಾರ್ಯಕ್ರಮ ನಡೆಯಿತು.
ಮಾಣಿಲ ಶ್ರೀಧಾಮ ಶ್ರೀ ದುರ್ಗಾ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ  ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಭಕ್ತಿಯ ಶಕ್ತಿಯನ್ನು ಉದ್ದೀಪಿಸುವ  ಕಾರ್ಯಕ್ರಮಗಳು ನಡೆಯಬೇಕು. ಜೀವನದಲ್ಲಿ ಗುರು ಮತ್ತು ಗುರಿಯನ್ನು  ಇಟ್ಟುಕೊಳ್ಳುವುದು ಅತ್ಯವಶ್ಯಕ. ಶೋಷಿತ ವರ್ಗವನ್ನು ಮೇಲೆತ್ತಲು ಸಮಾಜದಲ್ಲಿ ಒಗ್ಗಟ್ಟು, ಭಾವೈಕ್ಯತೆ ಅಗತ್ಯವಿದೆ. ಸಮಾಜದಲ್ಲಿ ಜಾತಿಯ ವಿಚಾರ ಹೆಚ್ಚಾಗುತ್ತಿದ್ದು, ದೇಶವನ್ನು ಕಟ್ಟುವ ಸಂದರ್ಭದಲ್ಲಿ ಎಲ್ಲರೂ ಒಂದಾಗಿರಬೇಕು ಎಂದು  ಹೇಳಿದರು.
ಗ್ರಾಮದಲ್ಲಿ ಬಹಳಷ್ಟು ಕ್ರಾಂತಿಗಳನ್ನು
ಮಾಡಲಾಗಿದ್ದು, ಕರ್ತವ್ಯಗಳನ್ನು ನಿರ್ವಹಿಸಿದ ಬಳಿಕ ಬದಲಾವಣೆ ಸಹಜವಾಗಿರುತ್ತದೆ. ಆಶ್ರಮ ಸೇವೆಯನ್ನು ಮಾಡಬೇಕೆಂಬ ನಿಟ್ಟಿನಲ್ಲಿ ಸಂಕಲ್ಪ ಮಾಡಲಾಗಿದ್ದು, ಉತ್ತರ ಭಾರತದ ಕಡೆಯಲ್ಲಿ ಸಾಕಷ್ಟು ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿದೆ. ಸಂತರಿಗೆ ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಿದೆ ಎಂದು ತಿಳಿಸಿದರು.

ಚಿತ್ರದುರ್ಗ ಕುಂಬಾರ ಗುಂಡಯ್ಯ ಪೀಠದ ಶ್ರೀ ಬಸವಮೂರ್ತಿ ಗುಂಡಯ್ಯ ಸ್ವಾಮೀಜಿ ಆಶೀರ್ವಚನ ನೀಡಿ ಸಮಾಜದ ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸ ಹಾಗೂ ಮಾರ್ಗದರ್ಶನಕ್ಕಾಗಿ ಜನನಾಯಕನ ಅವಶ್ಯಕತೆಯಿದೆ. ವಿಶ್ವದ ವಿವಿಧ ಕಡೆಯಲ್ಲಿ ಸಮಾಜದವರು ವಿಸ್ತರಣೆಯಾಗುತ್ತಿದ್ದು, ಕುಲ ಶಾಸ್ತ್ರ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ. ಈ ಮೂಲಕ ಸಮಾಜದ ಬೇಡಿಕೆಗಳನ್ನು ಸರ್ಕಾರದ ಮಟ್ಟಕ್ಕೆ ತಲುಪಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲ ಶಾಸ್ತ್ರೀಯ ಅಧ್ಯಯನದ ನಿಕಟಪೂರ್ವ ಸಂಶೋಧನಾ ಅಧಿಕಾರಿ ಕರಿಸಿದ್ದಪ್ಪ, ಸರ್ವಜ್ಞ ಪೀಠದ ಡಾ. ಮಂಜಪ್ಪ ಕುಂಬಾರ ಶರಣರು, ದಾವಣಗೆರೆ ಕುಂಬಾರ ಸಂಘದ ಅಧ್ಯಕ್ಷ ಕೆ. ಟಿ. ಪುಷ್ಪರಾಜ್, ತಿಪ್ಪೆಸ್ವಾಮಿ, ಮಹಿಳಾ ಸಮಿತಿಯ ಅಧ್ಯಕ್ಷೆ ವನಿತಾ ವಿ. ಶೆಟ್ಟಿ, ಶ್ರೀಧಾಮ ಮಿತ್ರ ವೃಂದದ ಅಧ್ಯಕ್ಷ ಬಾಲಕೃಷ್ಣ ರೈ ಕಳಗಿನಮನೆ ಮತ್ತಿತರರು ಉಪಸ್ಥಿತರಿದ್ದರು.
ರಾಜೇಶ್ ಮಾಣಿಲ ಕಾರ್ಯಕ್ರಮ ನಿರೂಪಿಸಿದರು.


Share with

Leave a Reply

Your email address will not be published. Required fields are marked *