ಮಣಿಪಾಲ: ಉಡುಪಿ- ಚಿಕ್ಕಮಗಳೂರು ಕ್ಷೇತ್ರ ವ್ಯಾಪ್ತಿಯಲ್ಲಿ 405 ಸೂಕ್ಷ್ಮ ಮತಗಟ್ಟೆಗಳಿದ್ದು, ಅವುಗಳಲ್ಲಿ 203 ಉಡುಪಿ, 202 ಚಿಕ್ಕಮಗಳೂರಿನಲ್ಲಿದೆ. ಈ ಎಲ್ಲ ಮತಗಟ್ಟೆಗೂ ಸಿಎಪಿಎಫ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಹಾಗೆಯೇ 1270 ಮತಗಟ್ಟೆಗಳಿಗೆ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ಇಲ್ಲಿನ ಎಲ್ಲ ಚಟುವಟಿಕೆಗಳನ್ನು ಆಯೋಗದ ದಿಲ್ಲಿ ಮತ್ತು ಬೆಂಗಳೂರಿನ ಕಚೇರಿಯಲ್ಲಿ ಪರಿವೀಕ್ಷಣೆ ಮಾಡಲಾಗುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಹೇಳಿದರು.
ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಜಿಲ್ಲೆಯಾದ್ಯಂತ ಚುನಾವಣೆಗೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದೇವೆ. ನೇಜಾರು, ಹಾಲಾಡಿ ಮತ್ತು ಕುಂದಾಪುರದಲ್ಲಿ ಹೆಚ್ಚುವರಿಯಾಗಿ ಚೆಕ್‌ಪೋಸ್ಟ್ ತೆರೆಯಲಾಗಿದೆ. 1,270 ಮತಗಟ್ಟೆಗಳಿಗೆ ಸಿಎಪಿಎಫ್, 459 ಮತಗಟ್ಟೆಗಳಲ್ಲಿ ಮೈಕ್ರೋ ಅಬ್ ಸರ್ವರ್, 18 ಮತಗಟ್ಟೆಗಳಲ್ಲಿ ವಿಡಿಯೋ ಚಿತ್ರೀಕರಣ ವ್ಯವಸ್ಥೆ ರೂಪಿಸಲಾಗಿದೆ ಎಂದರು.
ಶೇ. 97ರಷ್ಟು ಮನೆಗಳಿಗೆ ಮತಗಟ್ಟೆ ಚೀಟಿ ವಿತರಿಸಲಾಗಿದೆ. ಮೊಬೈಲ್ ಮೂಲಕ ಮತಗಟ್ಟೆ ಚೀಟಿ ಪಡೆಯಲು ಅವಕಾಶವಿದ್ದರೂ ಮತಗಟ್ಟೆಯೊಳಗೆ ಮೊಬೈಲ್ ಕೊಂಡೊಯ್ಯಲು ಅವಕಾಶ ಇಲ್ಲದೇ ಇರುವುದರಿಂದ ಮತಗಟ್ಟೆ ಚೀಟಿ ಅವಶ್ಯಕವಾಗಿದೆ. ಪಿಆರ್‌ಒ, ಎಪಿಆರ್‌ಒ, ಪಿಒ ಸೇರಿದಂತೆ 4120 ಅಧಿಕಾರಿ ಹಾಗೂ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಮಸ್ಟರಿಂಗ್ ರೂಂಗಳಿಗೂ ವಿಶೇಷ ಭದ್ರತೆ ಕಲ್ಪಿಸಲಾಗಿದೆ ಎಂದರು.