ಮಂಜೇಶ್ವರ: ಮುಂಬೈನಲ್ಲಿ ನಡೆದ ಏಷ್ಯಾಕಪ್ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಕುಂಜತ್ತೂರು ತೂಮಿನಾಡಿನ ಅಬ್ದುಲ್ಲಾ ನಿಹಾಲ್ ನೌಶಾದ್ ಎರಡು ಚಿನ್ನ ಗೆದ್ದು ನಾಡಿಗೆ ಹಾಗೂ ದೇಶಕ್ಕೆ ಕೀರ್ತಿ ತಂದಿದ್ದಾರೆ.ಭಾರತ, ಶ್ರೀಲಂಕಾ, ಜಪಾನ್, ಭೂತಾನ್, ಬಾಂಗ್ಲಾದೇಶ ಮತ್ತು ನೇಪಾಳದ ಸ್ಪರ್ಧಿಗಳನ್ನು ಸೋಲಿಸಿ ಮಿಂಚಿದ ನಿಹಾಲ್ ಕಟ್ಟಾ ಮತ್ತು ಕುಮಿಟೆ ಎರಡೂ ವಿಭಾಗಗಳಲ್ಲಿ ಪ್ರಥಮ ಸ್ಥಾನವನ್ನು ತನ್ನದಾಗಿಸಿದ್ದಾನೆ ಈ ಪೋರ.ಈಗಾಗಲೇ ಜಿಲ್ಲಾ ಮತ್ತು ರಾಜ್ಯ ಕರಾಟೆ ಚಾಂಪಿಯನ್ ಶಿಪ್ ಗಳಲ್ಲಿ ಅನೇಕ ಪ್ರಶಸ್ತಿಗಳನ್ನು ಗೆದ್ದಿರುವ ನಿಹಾಲ್, ೨೦೧೯ ರಲ್ಲಿ ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ.
೨೦೨೩ ರಲ್ಲಿ ಕರ್ನಾಟಕದಲ್ಲಿ ಆಯೋಜಿಸಲಾದ ೨೮ ನೇ ರಾಜ್ಯ ಮುಕ್ತ ಕರಾಟೆ ಚಾಂಪಿಯನ್ ಶಿಪ್ ಮಂಗಳೂರು ಟ್ರೋಫಿ ಪಂದ್ಯಗಳಲ್ಲಿ ರೆಫರಿಯಾಗಿ ಸೇವೆ ಸಲ್ಲಿಸುವ ಅವಕಾಶವೂ ೧೪ ವರ್ಷದ ಪೋರನಿಗೆ ಲಭಿಸಿದೆ.ಮಂಗಳೂರು ಪೀಸ್ ಪಬ್ಲಿಕ್ ಶಾಲೆಯ ೯ನೇ ತರಗತಿ ವಿದ್ಯಾರ್ಥಿ ಯಾಗಿರುವ ಈ ಪೋರನಿಗೆ ನಾಡಿನ ನಾನಾ ಭಾಗಗಳಿಂದ ಅಭಿನಂದನೆಗಳ ಪೂರವೇ ಹರಿದು ಬರುತ್ತಿದೆ.