

2025ರ ಬಜೆಟ್‌ಗಾಗಿ ನಡೆಯುತ್ತಿದ್ದ ಕಾಯುವಿಕೆ ಇಂದು ಕೊನೆಗೊಳ್ಳಲಿದೆ. ಮೋದಿ ಸರ್ಕಾರದ 3.0 ರ ಮೊದಲ ಪೂರ್ಣ ಬಜೆಟ್ನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಲಿದ್ದಾರೆ. ಇದು ನಿರ್ಮಲಾ ಸೀತಾರಾಮನ್ ಅವರ ಎಂಟನೇ ಬಜೆಟ್ ಭಾಷಣವಾಗಲಿದೆ. ಅವರಿಗಿಂತ ಮೊದಲು, ಮೊರಾರ್ಜಿ ದೇಸಾಯಿ ಮಾತ್ರ 10 ಬಾರಿ ಬಜೆಟ್ ಮಂಡಿಸಿದ್ದರು.
ಇಂದು ಮೋದಿ ಸರ್ಕಾರ 3.0 ರ ಮೊದಲ ಪೂರ್ಣ ಬಜೆಟ್ ಮಂಡನೆಯಾಗಲಿದೆ. ಸುಮಾರು 1.4 ಶತಕೋಟಿ ದೇಶವಾಸಿಗಳ ಕಣ್ಣು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಮೇಲೆ ಇವೆ. ಮಧ್ಯಮ ವರ್ಗಕ್ಕೆ ತೆರಿಗೆ ವಿನಾಯಿತಿ ಸಿಗುತ್ತದೆಯೇ ಎಂಬುದು ಈ ಬಾರಿಯ ಬಹುದೊಡ್ಡ ಪ್ರಶ್ನೆ. ಇಷ್ಟೇ ಅಲ್ಲದೇ ಅಗ್ಗದ ವಸತಿ ಮತ್ತು ಶಿಕ್ಷಣದ ಕನಸು ನನಸಾಗುತ್ತದೆಯೇ? ಎಂಬುವುದಕ್ಕೂ ಇಂದು ಉತ್ತರ ಸಿಗಲಿದೆ.
ಹೌದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಅಂದರೆ ಶನಿವಾರ (ಫೆಬ್ರವರಿ 1, 2025) ಮೋದಿ ಸರ್ಕಾರದ ಮೂರನೇ ಅವಧಿಗೆ ಕೇಂದ್ರ ಬಜೆಟ್ ಮಂಡಿಸಲು ಸಜ್ಜಾಗಿದ್ದಾರೆ. ಇಂದು ಬೆಳಿಗ್ಗೆ 11 ಗಂಟೆಗೆ ಸಂಸತ್ತಿನಲ್ಲಿ ಈ ಸಾಮಾನ್ಯ ಬಜೆಟ್ ಮಂಡನೆಯಾಗಲಿದೆ.
ಎನ್‌ಡಿಎ ಸರ್ಕಾರದ ಅವಧಿಯಲ್ಲಿ, ನಿರ್ಮಲಾ ಸೀತಾರಾಮನ್ ಇದುವರೆಗೆ ಆರು ಪೂರ್ಣ ಪ್ರಮಾಣದ ಮತ್ತು ಎರಡು ಮಧ್ಯಂತರ ಬಜೆಟ್‌ಗಳನ್ನು ಮಂಡಿಸಿದ್ದಾರೆ. ಈ ಮೂಲಕ 2025 ರ ಕೇಂದ್ರ ಬಜೆಟ್ ಹಣಕಾಸು ಸಚಿವೆ ಸೀತಾರಾಮನ್ ಅವರು ಸಂಸತ್ತಿನಲ್ಲಿ ಮಂಡಿಸುವ ಎಂಟನೇ ಬಜೆಟ್ ಭಾಷಣವಾಗಲಿದೆ.
ಈ ಬಜೆಟ್ನಿಂದ ಮಧ್ಯಮ ವರ್ಗದವರು ಆದಾಯ ತೆರಿಗೆ ಸ್ಲ್ಯಾಬ್‌ನಲ್ಲಿ ಪರಿಹಾರವನ್ನು ನಿರೀಕ್ಷಿಸುತ್ತಿದ್ದಾರೆ. ಮಧ್ಯಮ ವರ್ಗದ ತೆರಿಗೆ ಕಡಿತದ ಆಕಾಂಕ್ಷೆಗಳು ಮತ್ತು ಬೆಳವಣಿಗೆಯನ್ನು ಹೆಚ್ಚಿಸಲು ಆರ್ಥಿಕತೆಯ ಅಗತ್ಯಗಳ ನಡುವೆ ಕೇಂದ್ರ ಬಜೆಟ್ ಸಮತೋಲನವನ್ನು ಸಾಧಿಸುವ ನಿರೀಕ್ಷೆಯಿದೆ.




