ಬೆಳ್ತಂಗಡಿ: ರಸ್ತೆ ಬದಿಯಲ್ಲಿದ್ದ ಗೂಡು ಅಂಗಡಿಯನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ ಘಟನೆ ನಿಡ್ಲೆ ಗ್ರಾಮದ ಬೂಡುಜಾಲು ಎಂಬಲ್ಲಿ ನಡೆದಿದ್ದು, ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಲಾಗಿದೆ.
ಕಳೆದ ಮೂರು ವರ್ಷಗಳಿಂದ ರಾಜ್ಯ ಹೆದ್ದಾರಿಯ ಬದಿಯಲ್ಲಿ ಕೊಕ್ಕಡ ಗ್ರಾಮದ ಮಲ್ಲಿಗೆ ಮಜಲು ನಿವಾಸಿ ಅಬ್ದುಲ್ ಅಜೀಜ್ ಅವರು ಗೂಡು ಅಂಗಡಿ ಇಟ್ಟು ವ್ಯಾಪಾರವನ್ನು ನಡೆಸುತ್ತಿದ್ದರು. ಶುಕ್ರವಾರ ರಾತ್ರಿಯ ವೇಳೆ ಎಂದಿನಂತೆ ಅಂಗಡಿಯನ್ನು ಮುಚ್ಚಿ ಹೋಗಿದ್ದ ಅಬ್ದುಲ್ ಅಜೀಜ್ ಅವರು ಡಿ.1ರಂದು ಬೆಳಿಗ್ಗೆ ಬಂದು ನೋಡಿದಾಗ ಅಂಗಡಿಯನ್ನು ಧ್ವಂಸಗೊಳಿಸಿರುವುದು ಕಂಡು ಬಂದಿದೆ. ಅಂಗಡಿಯಲ್ಲಿದ್ದ ವಸ್ತುಗಳೆಲ್ಲವನ್ನು ಹೊರಗೆಳೆದು ನಾಶಗೊಳಿಸಲಾಗಿದೆ. ತಂಪು ಪಾನೀಯಗಳ ಬಾಟಲ್ ಗಳನ್ನು ಒಡೆದು ಹಾಕಲಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ತಿಳಿದು ಬಂದಿದೆ.