ಶಿರ್ವ: ಉಡುಪಿಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದ ಯುವತಿ ಮನೆಗೆ ಬಾರದೆ ಕಾಣೆಯಾಗಿದ್ದು, ಯವತಿಯ ಶವ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಪಡುಬೆಳ್ಳೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪದ ಸೇತುವೆಯ ಬಳಿ ಪಾಪನಾಶಿನಿ ನದಿಯ ಗುಂಡಿಯಲ್ಲಿ ಆ.13 ದಂದು ಪತ್ತೆಯಾಗಿದೆ ಎಂದು ವರದಿಯಾಗಿದೆ.
ಮೂಡುಬೆಳ್ಳೆ ಕೊಂಗಿಬೈಲು ನಿವಾಸಿ ಸದಾಶಿವ ಪೂಜಾರಿ ಅವರ ಪುತ್ರಿ ವಿನಿತಾ (22) ಅ.9ರಂದು ಮಧ್ಯಾಹ್ನ 3 ಗಂಟೆಗೆ ತನ್ನ ಮನೆಯಿಂದ ಹೋದವರು ಕಾಣೆಯಾದ ಬಗ್ಗೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈಕೆ ಎಲೆಕ್ಟ್ರಿಕಲ್ ಬೈಕ್ ಶೋ ರೂಂ ನಲ್ಲಿ ಸುಮಾರು 4 ತಿಂಗಳಿನಿಂದ ಕೆಲಸ ಮಾಡಿಕೊಂಡಿದ್ದು, ವಾರದ ಹಿಂದೆ ಕೆಲಸಬಿಟ್ಟಿದ್ದರು ಎಂದು ತಿಳಿದು ಬಂದಿದೆ. ಮಾನಸಿಕವಾಗಿ ನೊಂದಿದ್ದ ಈಕೆ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿರಬೇಕೆಂದು ಶಂಕಿಸಲಾಗಿದ್ದು, ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮಲ್ಪೆಯ ಮುಳುಗು ತಜ್ಞ ಈಶ್ವರ್ ಮಲ್ಪೆ ಕೊಳೆತ ಶವವನ್ನು ನದಿಯಿಂದ ಮೇಲಕ್ಕೆತ್ತಿದ್ದು, ಮರಣೋತ್ತರ ಶವ ಪರೀಕ್ಷೆ ನಡೆಸಲು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಶಿರ್ವ ಪೊಲೀಸ್ ಠಾಣಾಧಿಕಾರಿ ಸಕ್ತಿವೇಲು ಮತ್ತು ಕ್ರೈಂ ವಿಭಾಗದ ಪಿಎಸ್‌ಐ ಅನಿಲ್ ಕುಮಾರ್ ಸ್ಥಳದಲ್ಲಿದ್ದು ತನಿಖೆ ಮುಂದುವರಿಸಿದ್ದಾರೆ.