ಪುತ್ತೂರು: ದ.ಕ ಜಿಲ್ಲೆಯಲ್ಲಿ 5,500 ಹೊಸ ಪಡಿತರ ಚೀಟಿಯ ಅರ್ಜಿ ಬಾಕಿ ಇದೆ. ಕಳೆದ ಮೂರು ತಿಂಗಳಿಂದ ತಿದ್ದುಪಡಿಗೆ ವಾರದಲ್ಲಿ ಎರಡು ದಿನ ಅವಕಾಶ ಕಲ್ಪಿಸಿದರೂ ಸರ್ವರ್ ಬ್ಯುಸಿ ಇರುವ ಕಾರಣ ಯಾವುದೇ ತಿದ್ದುಪಡಿಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಪುತ್ತೂರು ತಾಲೂಕಿನಲ್ಲಿ ಮೂರು ತಿಂಗಳಲ್ಲಿ ಕೇವಲ ಏಳು ಜನರಿಗೆ ಮಾತ್ರ ತಿದ್ದುಪಡಿ ಮಾಡಲು ಸಾಧ್ಯವಾಗಿದೆ ಈ ಸಮಸ್ಯೆಯನ್ನು ಬಗೆಹರಿಸಬೇಕು ತಿಂಗಳಲ್ಲಿ ಹತ್ತು ದಿನ ತಿದ್ದುಪಡಿ ಮಾಡಲು ಅವಕಾಶ ಕಲ್ಪಿಸಬೇಕು ಮತ್ತು ಸರ್ವರ್ ಬ್ಯುಸಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಪುತ್ತೂರು ಶಾಸಕ ಅಶೋಕ್ ರೈ ಯವರು ಸರಕಾರವನ್ನು ಆಗ್ರಹಿಸಿದ್ದಾರೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭಾ ಅಧಿವೇಶನ ಗಮನಸೆಳೆಯುವ ಕಲಾಪದ ವೇಳೆ ಮಾತನಾಡಿದ ಶಾಸಕ ಅಶೋಕ್ ರೈಯವರು ಸರಕಾರದ ಯೋಜನೆಯನ್ನು ಪಡೆದುಕೊಳ್ಳಲು ರೇಶನ್ ಕಾರ್ಡ್ ಇಲ್ಲದೆ ಸಾಧ್ಯವಾಗುತ್ತಿಲ್ಲ. ಹೆಚ್ಚಾಗಿ ಬಡವರೇ ತೊಂದರೆಗೊಳಗಾಗಿದ್ದು ರೇಶನ್ ಕಾರ್ಡ್ ತಿದ್ದುಪಡಿ ಅಥವಾ ಹೊಸ ರೇಶನ್ ಕಾರ್ಡ್ ಪಡೆಯಲು ಸೈಬರ್ ಗಳಿಗೆ ಅಲೆದಾಡುವಂತಾಗಿದೆ. ಸರ್ವರ್ ಬ್ಯುಸಿಯಿಂದಾಗಿ ಈ ಸಮಸ್ಯೆ ಉಂಟಾಗಿದ್ದು ಶೀಘ್ರವೇ ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದ್ದಾರೆ.