ಬಿಸಿಸಿಐ ಮುಂದೆ ಮಂಡಿಯೂರಿದ ಮೊಹ್ಸಿನ್ ನಖ್ವಿ; ಶೀಘ್ರದಲ್ಲೇ ಭಾರತದ ಕೈಸೇರಲಿದೆ ಏಷ್ಯಾಕಪ್ ಟ್ರೋಫಿ

Share with

2025 ರ ಏಷ್ಯಾಕಪ್ (Asia Cup) ಫೈನಲ್‌ನಲ್ಲಿ ಪಾಕಿಸ್ತಾನವನ್ನು ಐದು ವಿಕೆಟ್ಗಳಿಂದ ಮಣಿಸಿದ್ದ ಟೀಂ ಇಂಡಿಯಾ (India vs Pakistan) 9ನೇ ಬಾರಿಗೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಸೆಪ್ಟೆಂಬರ್ 28 ರಂದು ನಡೆದಿದ್ದ ಈ ಪಂದ್ಯವನ್ನು ಗೆದ್ದುಕೊಂಡಿದ್ದ ಟೀಂ ಇಂಡಿಯಾಕ್ಕೆ ನಾಲ್ಕು ದಿನ ಕಳೆದರು ಏಷ್ಯಾಕಪ್ ಟ್ರೋಫಿ ಮಾತ್ರ ಕೈಸೇರಿಲ್ಲ. ಇದಕ್ಕೆ ಕಾರಣ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ (Mohsin Naqvi). ಟೀಂ ಇಂಡಿಯಾ ತನ್ನ ಕೈನಿಂದ ಏಷ್ಯಾಕಪ್ ಟ್ರೋಫಿಯನ್ನು ಸ್ವೀಕರಿಸುತ್ತಿಲ್ಲ ಎಂಬುದನ್ನು ಸಹಿಸದ ನಖ್ವಿ, ಏಷ್ಯಾಕಪ್ ಟ್ರೋಫಿ ಹಾಗೂ ಮೆಡಲ್ಗಳನ್ನು ಭಾರತ ತಂಡಕ್ಕೆ ನೀಡದೆ, ತನ್ನೊಂದಿಗೆ ತೆಗೆದುಕೊಂಡು ಹೋಗಿದ್ದರು.


ಭಾರತದ ಕೈಸೇರಲಿದೆ ಟ್ರೋಫಿ
ಇತ್ತ ಮೊಹ್ಸಿನ್ ನಖ್ವಿ ಈ ನಡೆಗೆ ಸೊಪ್ಪು ಹಾಕದ ಟೀಂ ಇಂಡಿಯಾ ಟ್ರೋಫಿ ಇಲ್ಲದೆಯೇ ಸಂಭ್ರಮಾಚರಣೆ ನಡೆಸಿತ್ತು. ಇದಾದ ಬಳಿಕ ಮೊಹ್ಸಿನ್ ನಖ್ವಿ ನಡೆಗೆ ತೀವ್ರ ಆಕ್ರೋಶ ಹೊರಹಾಕಿದ್ದ ಬಿಸಿಸಿಐ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಸಭೆಯಲ್ಲಿ ಚಾಂಪಿಯನ್ ತಂಡಕ್ಕೆ ನೀಡಬೇಕಿದ್ದ ಟ್ರೋಫಿಯನ್ನು ಕೂಡಲೇ ಹಿಂದಿರುಗಿಸಬೇಕೆಂದು ಒತ್ತಾಯಿಸಿತ್ತು. ಇದೀಗ ಬಿಸಿಸಿಐ ಒತ್ತಡಕ್ಕೆ ಮಣಿದಿರುವ ನಖ್ವಿ ಟ್ರೋಫಿಯನ್ನು ಭಾರತ ತಂಡಕ್ಕೆ ನೀಡಲು ಒಪ್ಪಿದ್ದಾರೆ ಎಂದು ವರದಿಯಾಗಿದೆ.

ಏಷ್ಯಾಕಪ್ ಫೈನಲ್ ಮುಗಿದ ಬಳಿಕ ತನ್ನದೇ ವಾದವನ್ನು ಮುಂದಿಟ್ಟುಕೊಂಡು ಹಠಮಾರಿಯಾಗಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕೊನೆಗೂ ತನ್ನೆಲ್ಲ ದುರಹಂಕಾರವನ್ನು ಬದಿಗಿಟ್ಟು ಬಿಸಿಸಿಐ ಮುಂದೆ ಮಂಡಿಯೂರಿದೆ. ನಖ್ವಿ ತೆಗೆದುಕೊಂಡು ಹೋಗಿದ್ದ ಏಷ್ಯಾಕಪ್ ಟ್ರೋಫಿಯನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್, ಯುಎಇ ಕ್ರಿಕೆಟ್ ಮಂಡಳಿಗೆ ಹಸ್ತಾಂತರಿಸಿದೆ ಎಂದು ತಿಳಿದುಬಂದಿದೆ. ಶೀಘ್ರದಲ್ಲೇ ಟ್ರೋಫಿಯನ್ನು ಬಿಸಿಸಿಐಗೆ ಹಸ್ತಾಂತರಿಸಲಾಗುವುದು ಎಂದು ವರದಿಯಾಗಿದೆ.


Share with

Leave a Reply

Your email address will not be published. Required fields are marked *