ಮಂಗಳೂರು: ಕೆತ್ತಿಕಲ್ ಗುಡ್ಡದ ಮೇಲಿವೆ 200ಕ್ಕೂ ಹೆಚ್ಚು ಮನೆ, ವಯನಾಡು ರೀತಿಯ ದುರಂತದ ಭೀತಿ

Share with

ಮಂಗಳೂರು : ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತ, ಗುಡ್ಡ ಕುಸಿತದ ಪರಿಣಾಮ ನೂರಾರು ಜನ ಮೃತಪಟ್ಟಿದ್ದಾರೆ. ಇನ್ನೂ ಮೃತದೇಹಗಳು ಪತ್ತೆಯಾಗುತ್ತಲೇ ಇವೆ. ಇಂಥ ಭಯಾನಕ ಸನ್ನಿವೇಶದಲ್ಲಿ ಇದೀಗ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಬಳಿಯೂ ಅಂಥದ್ದೇ ಅನಾಹುತ ಸಂಭವಿಸುವ ಭೀತಿ ಎದುರಾಗಿದೆ. ನಗರದ ಹೊರವಲಯದ ವಾಮಂಜೂರು ಸಮೀಪದ ಕೆತ್ತಿಕಲ್ ಗುಡ್ಡದ ಮಣ್ಣು ಕುಸಿಯುತ್ತಲೇ ಇದ್ದು ಆತಂಕ ಸೃಷ್ಟಿಸಿದೆ.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ಅವೈಜ್ಞಾನಿಕವಾಗಿ ಗುಡ್ಡ ಅಗೆತ ಮಾಡಿರುವ ಕಾರಣ ಇದೀಗ ಭಾರಿ ಮಳೆಯ ಸಂದರ್ಭದಲ್ಲಿ ಗುಡ್ಡದ ಮಣ್ಣು ಕುಸಿಯುತ್ತಿದೆ. ಹೆದ್ದಾರಿ ಕಾಮಗಾರಿ ಜೊತೆ ಮಣ್ಣು ಗಣಿಗಾರಿಕೆ ನಡೆಸಿದ ಆರೋಪವೂ ಇಲ್ಲಿ ಕೇಳಿಬಂದಿದೆ. ಬೇಕಾಬಿಟ್ಟಿಯಾಗಿ ಕೆತ್ತಿಕಲ್ ಗುಡ್ಡ ಅಗೆಯಲಾಗಿದ್ದು, ಆ ಸ್ಥಳ ಭಯಾನಕವಾಗಿದೆ.

ಗುಡ್ಡ ಅಗೆಯುವ ಸಂದರ್ಭ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಆದರೆ, ಆ ಬಗ್ಗೆ ಅಧಿಕಾರಿಗಳು ಮೌನವಹಿಸಿದ್ದರು. ಇದೀಗ ಊರೆಲ್ಲಾ ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಮುಚ್ಚಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆತ್ತಿಕಲ್ ಗುಡ್ಡದ ಮೇಲ್ಭಾಗದಲ್ಲಿವೆ 200ಕ್ಕೂ ಹೆಚ್ಚು ಮನೆ
ಕೆತ್ತಿಕಲ್ ಗುಡ್ಡದ ಮೇಲ್ಭಾಗದಲ್ಲಿ 200ಕ್ಕೂ ಹೆಚ್ಚು ಮನೆಗಳಿವೆ. ಒಂದು ವೇಳೆ ಇಡೀ ಗುಡ್ಡವೇನಾದರೂ ಕುಸಿದುಹೋದಲ್ಲಿ ಕೇರಳದ ವಯನಾಡು ದುರಂತದಂತೆ ಇಲ್ಲಿಯೂ ಸಂಭವಿಸುವ ಆತಂಕ ಎದುರಾಗಿದೆ.

ಸದ್ಯ ಜರಿದಿರುವ ಗುಡ್ಡದ ಸಮೀಪದಲ್ಲೇ ಇರುವ ಮನೆಗಳಿಗೆ ನೋಟಿಸ್ ನೀಡಲಾಗಿದೆ. ಅಪಾಯಕಾರಿ ಸ್ಥಳದಲ್ಲಿನ 12 ಮನೆಗಳಿಗೆ ನೋಟಿಸ್ ನೀಡಿರುವ ಅಧಿಕಾರಿಗಳು, ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಿದ್ದಾರೆ. ಹೀಗಾಗಿ ಜನ ಮನೆ ಖಾಲಿ ಮಾಡಿಕೊಂಡು ಹೋಗಿದ್ದಾರೆ. ಯಾರೋ ಮಾಡಿದ ತಪ್ಪಿಗೆ ಜನ ಶಿಕ್ಷೆ ಅನುಭವಿಸುವಂತಾಗಿದೆ.


Share with

Leave a Reply

Your email address will not be published. Required fields are marked *