ಮಂಗಳೂರು: ನಾಲ್ಕುವರೆ ತಿಂಗಳ ಮಗುವನ್ನು ಹತ್ಯೆಗೈದು ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಗುಜ್ಜರಕೆರೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಫಾತಿಮಾ ರುಕಿಯಾ(23) ಆತ್ಮಹತ್ಯೆ ಮಾಡಿಕೊಂಡವರಾಗಿದ್ದು, ಫಾತಿಮಾ ಅವರಿಗೆ ಒಂದೂವರೆ ವರ್ಷದ ಹಿಂದೆ ವಿವಾಹವಾಗಿದ್ದು, ಅವರಿಗೆ ನಾಲ್ಕುವರೆ ತಿಂಗಳ ಮಗುವಿತ್ತು. ಹೆರಿಗೆಯ ನಂತರ ಫಾತಿಮಾ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಹಾಗಾಗಿ ಅವರಿಗೆ ಮಾನಸಿಕ ವೈದ್ಯೆಯ ಮೂಲಕ ಚಿಕಿತ್ಸೆ ಕೊಡಿಸಲಾಗಿತ್ತು ಎನ್ನಲಾಗಿದೆ.
ಡಿ.2ರಂದು ಯಾರೂ ಇಲ್ಲದ ವೇಳೆ ಫಾತಿಮಾ ಅವರು ತಾವು ವಾಸವಾಗಿದ್ದ ಗುಜ್ಜರಕೆರೆಯ ಅಪಾರ್ಟ್‌ಮೆಂಟ್‌ನ ಬೆಡ್‌ರೂಮ್‌ನ ಗ್ಯಾಲರಿಯಲ್ಲಿ ಪ್ಲಾಸ್ಟಿಕ್ ಟಬ್‌ನಲ್ಲಿ ನೀರು ತುಂಬಿಸಿ ಮಗುವನ್ನು ಅದರಲ್ಲಿ ಮುಳುಗಿಸಿ ಉಸಿರುಗಟ್ಟಿಸಿ ಕೊಲೆ ಮಾಡಿ ತಾನು ಕಿಟಕಿಯ ಕಬ್ಬಿಣದ ಸರಳಿಗೆ ಸೀರೆಯ ತುದಿಯನ್ನು ಕಟ್ಟಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಈ ಬಗ್ಗೆ ಮಂಗಳೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.