ಕಾಸರಗೋಡು: ಹಲವು ಬಾರಿ ಚಾ ಕೇಳಿದರೂ ಕೊಟ್ಟಿಲ್ಲವೆಂಬ ಕಾರಣಕ್ಕೆ ಸಿಟ್ಟಿಗೆದ್ದ ಅತ್ತೆ ಮೊಮ್ಮಗಳ ಕಣ್ಮುಂದೆಯೇ ಸೊಸೆಯನ್ನು ಕೊಚ್ಚಿ ಕೊಂದ ದಾರುಣ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯಿಂದ ವರದಿಯಾಗಿದೆ.

ಇಲ್ಲಿನ ಪೂಕಾಟ್ ಪಾಡಂ ಕುಟ್ಟಂಪಾರ ನಿವಾಸಿ ರಜಿತ ಕೊಲೆಯಾಗಿರುವ ಮಹಿಳೆ. ಸೊಸೆಯನ್ನೇ ಕೊಲೆಗೈದ ಅತ್ತೆ ಶಾಂತಾಳನ್ನು ಪೊಲೀಸರು ಬಂಧಿಸಿದ್ದಾರೆ. ಹಲವು ಸಲ ಚಾ ಕೇಳಿದರೂ ಕೊಡಲಿಲ್ಲ ಎಂಬ ಸಿಟ್ಟಿನಿಂದ ಕೊಲೆ ನಡೆಸಿರುವುದಾಗಿ ಬಂಧಿತ ಮಹಿಳೆ ಪೊಲೀಸರಲ್ಲಿ ತಪ್ಪೊಪ್ಪಿಕೊಂಡಿದ್ದಾರೆ.
ಮೃತ ರಜಿತಾಳ ಪುತ್ರಿಯ ಕಣ್ಮುಂದೆಯೇ ಹಲವು ಬಾರಿ ಕತ್ತಿಯಿಂದ ಕಡಿದು ಕೊಲೆ ಮಾಡಲಾಗಿದೆ. ಸೋಮವಾರ ಬೆಳಿಗ್ಗೆ ಈ ಘಟನೆ ನಡೆದಿದ್ದು, ಮಗುವಿನ ಬೊಬ್ಬೆ ಕೇಳಿ ಬಂದ ನೆರೆಹೊರೆಯವರು ರಜಿತಾ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದರೂ ಕೂಡಾ ಜೀವ ಉಳಿಸಲು ಸಾಧ್ಯವಾಗಲಿಲ್ಲ.




