ತಿರುವನಂತಪುರ: ರಾಜ್ಯಪಾಲರು ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಆರೆಸ್ಸೆಸ್ ಕಚೇರಿಗಳಲ್ಲಿ ಬಳಸುವ ಭಾರತಮಾತೆ ಫೋಟೋ ಬಳಕೆ ಮಾಡಿದ್ದು, ಕೇರಳದಲ್ಲಿ ವಿವಾದ ಸೃಷ್ಟಿಸಿದ ಬೆನ್ನಲ್ಲೇ ಸರ್ಕಾರಿ ಕಾರ್ಯಕ್ರಮದಲ್ಲಿ ಈ ಫೋಟೋ ಬಳಕೆಗೆ ಸರಕಾರ ನಿರ್ಬಂಧ ವಿಧಿಸಿದೆ.
ರಾಜ್ಯಪಾಲರಿರುವ ಸರ್ಕಾರದ ಕಾರ್ಯಕ್ರಮಗಳಲ್ಲಿ ರಾಷ್ಟ್ರೀಯ ಚಿಹ್ನೆಗಳನ್ನು ಮಾತ್ರ ಬಳಸುವಂತೆ ಕೇರಳ ಸಿಎಂ ಪಿಣರಾಯಿ ವಿಜಯನ್ ರಾಜ್ಯಪಾಲರ ಭವನಕ್ಕೆ ಸೂಚನೆ ಕಳುಹಿಸಿದ್ದಾರೆ. ರಾಜ್ಯಪಾಲರು ರಾಜ್ಯದ ಮುಖ್ಯಸ್ಥರಾಗಿರುವುದರಿಂದ ಅವರು ಪಾಲ್ಗೊಳ್ಳುವ ಎಲ್ಲ ಕಾರ್ಯಕ್ರಮಗಳಲ್ಲಿ ರಾಜಕೀಯ ಮತ್ತು ಧಾರ್ಮಿಕ ಚಿಹ್ನೆ, ಲಾಂಛನವನ್ನು ಬಳಸುವುದಕ್ಕೆ ಸಾಂವಿಧಾನದಲ್ಲಿ ಅವಕಾಶವಿಲ್ಲ ಎಂದು ಸಂಪುಟ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಪಿಣರಾಯಿ ರಾಜಭವನಕ್ಕೆ ಕಳುಹಿಸಿರುವ ತಮ್ಮ ಸೂಚನಾಪತ್ರದಲ್ಲಿ ತಿಳಿಸಿದ್ದಾರೆ.
ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ತಾವು ಭಾಗವಹಿಸಿದ್ದ ಕಾರ್ಯಕ್ರಮಗಳಲ್ಲಿ ತಮ್ಮ ಪಕ್ಕದಲ್ಲಿ ಸಿಂಹದ ಮೇಲೆ ಕುಳಿತಿರುವ ಕೇಸರಿ ಧ್ವಜವನ್ನು ಹಿಡಿದಿರುವ ಭಾರತಮಾತೆಯ ಪ್ರತಿಮೆಯನ್ನು ಇರಿಸಿಕೊಳ್ಳುತ್ತಿರುವುದಕ್ಕೆ ಆಡಳಿತಾರೂಢ ಎಲ್‌ಡಿಎಫ್ ಮತ್ತು ವಿಪಕ್ಷ ಯುಡಿಎಫ್ ತೀವ್ರ ವಿರೋಧವನ್ನು ವ್ಯಕ್ತಪಡಿಸಿವೆ.