ಸತ್ತಂತೆ ನಟಿಸಿ ದರೋಡೆಕೋರರಿಂದ ಬಚಾವ್ ಆದ ಮಹಿಳೆ

Share with

ಚಿಕ್ಕಬಳ್ಳಾಪುರ, ಡಿಸೆಂಬರ್ 11: ಮನೆಯಲ್ಲಿ ಒಂಟಿ ಮಹಿಳೆ ಇರುವ ಪಕ್ಕಾ ಮಾಹಿತಿ ಆಧರಿಸಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ಬೆದರಿಕೆ ಹಾಕಿ, ಕೈ, ಕಾಲು, ಬಾಯಿ ಮತ್ತು ಕಣ್ಣು ಕಟ್ಟಿ ಮನೆಯಲ್ಲಿರುವ ಕೆಜಿಗಟ್ಟಲೆ ಚಿನ್ನವನ್ನು ದೋಚಿರುವ ಪ್ರಕರಣ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಟೌನ್‍ನ ಇಲಾಹಿನಗರದಲ್ಲಿ ನಡೆದಿದೆ. ದರೋಡೆಗೂ ಮೊದಲು ಮಹಿಳೆ ಮೇಲೆ ಗಂಭೀರ ಹಲ್ಲೆ ನಡೆಸಲಾಗಿದ್ದು, ಸತ್ತಂತೆ ನಟಿಸಿ ದುರುಳರಿಂದ ಮಹಿಳೆ ಪ್ರಾಣ ಉಳಿಸಿಕೊಂಡಿದ್ದಾರೆ. ಗಾಯಾಳು ಮುಬಾರಕ್ರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.

ಇಲಾಹಿನಗರದ ನಿವಾಸಿಯಾಗಿರೋ ಮುಬಾರಕ್ರ ಮನೆಯಲ್ಲಿದ್ದ ಗಂಡ, ಮಕ್ಕಳು, ಸೊಸೆ ಸೇರಿ ಎಲ್ಲರೂ ಅಜ್ಮೀರ್ ದರ್ಶನಕ್ಕೆ ಹೋಗಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ದುಷ್ಕರ್ಮಿಗಳು ಮನೆಗೆ ನುಗ್ಗಿದ್ದು, ಮಚ್ಚನ್ನು ಮುಬಾರಕ್ ಕತ್ತಿಗಿಟ್ಟು ಪ್ರಾಣ ಬೆದರಿಕೆ ಹಾಕಿದ್ದಾರೆ. ರಾತ್ರಿಯಿಡೀ ಮನೆಶೋಧ ಮಾಡಿರುವ ದುಷ್ಕರ್ಮಿಗಳು, ಮುಬಾರಕ್‍ಗೆ ಸೇರಿರುವ ಅವರ ತಂದೆ-ತಾಯಿ ಗಿಫ್ಟ್ ನೀಡಿದ್ದ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ. ತನ್ನ ಸೊಸೆಯ ಅಣ್ಣ ಮತ್ತು ಮತ್ತೋರ್ವ ಅಪರಿಚಿತನೇ ಮನೆಗೆ ನುಗ್ಗಿ ದರೋಡೆ ನಡೆಸಿರೋದಾಗಿ ಮುಬಾರಕ್ ಆರೋಪಿಸಿದ್ದಾರೆ.

ಇನ್ನು ಮನೆಗೆ ನುಗ್ಗಿದ್ದ ದುಷ್ಕರ್ಮಿಗಳು ಚಾಣಾಕ್ಷತೆ ಮೆರೆದಿದ್ದು, ಸಿಸಿ ಕ್ಯಾಮರಾ ವೈರ್ಗಳನ್ನು ಕತ್ತರಿಸಿದ್ದಾರೆ. ದರೋಡೆಕೋರರನ್ನು ತಾನು ನೋಡಿದ್ದೇನೆ ಎಂದು ಹಲ್ಲೆಗೊಳಗಾದ ಮಹಿಳೆ ಮುರಾಕ್ ಹೇಳುತ್ತಿದ್ದರೂ ಆಕೆಯ ಕುಟುಂಬಸ್ಥರ ಹೇಳಿಕೆ ಇದಕ್ಕೆ ಭಿನ್ನವಾಗಿದೆ. ಮುಬಾರಕ್ ಗಂಡ, ಮಕ್ಕಳು, ಮುಬಾರಕ್ ಹೇಳಿಕೆ ಮೇಲೆ ಅನುಮಾನ ವ್ಯಕ್ತಪಡಿಸಿದ್ದು, ನಮ್ಮ ಮನೆಯಲ್ಲಿ ಕೆಜಿಗಟ್ಟಲೆ ಚಿನ್ನಾಭರಣವೇ ಇರಲಿಲ್ಲ ಎಂಬ ಅಚ್ಚರಿಯ ಮಾಹಿತಿ ನೀಡಿದ್ದಾರೆ. ಅಲ್ಲದೆ ಈ ಬಗ್ಗೆ ದೂರು ದಾಖಲಿಸದಂತೆ ಪೊಲೀಸರ ಮೇಲೆ ಒತ್ತಡವನ್ನೂ ಹೇರಿದ್ದಾರೆ.

ದರೋಡೆ ಹಿಂದೆ ಗಂಡ, ಸೊಸೆ ಕೈವಾಡ?
ಮತ್ತೊಂದಡೆ ಮುಬಾರಕ್‍ಗೆ ಸೇರಿದ ಚಿನ್ನಾಭರಣಗಳ ಮೇಲೆ ಸ್ವತಃ ಆಕೆಯ ಗಂಡ ಸಿರಾಜ್ ಹಾಗೂ ಸೊಸೆಯ ಕಣ್ಣಿತ್ತಂತೆ. ಗಂಡ ಸಿರಾಜ್ ಚಿನ್ನಾಭರಣ ಇಟ್ಟುಕೊಂಡು ಏನು ಮಾಡ್ತೀಯಾ, ನಿವೇಶನ ಖರೀದಿ ಮಾಡೋಣ ಗೋಲ್ಡ್ ಕೊಡು ಎಂದು ಗಲಾಟೆ ಮಾಡಿದ್ದನಂತೆ. ಇದರಿಂದ ದರೋಡೆ ಪ್ರಕರಣದ ಹಿಂದೆ ತನ್ನ ಸೊಸೆ, ಗಂಡನ ಶಾಮೀಲು ಇರುವುದಾಗಿ ಮುಬಾರಕ್ ಆರೋಪಿಸಿದ್ದಾರೆ. ಈ ನಡುವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.


Share with

Leave a Reply

Your email address will not be published. Required fields are marked *