ತಿರುವನಂತಪುರ: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರು ಉತ್ತರ ಹಾಗೂ ದಕ್ಷಿಣ ಭಾರತದ ಕೆಲವು ದೇವಸ್ಥಾನಗಳಿಗೆ ಭಾನುವಾರ ಭೇಟಿ ನೀಡಿ, ಕೋಟ್ಯಂತರ ರೂಪಾಯಿ ದೇಣಿಗೆ ಘೋಷಿಸಿದರು.

ಅಂಬಾನಿ ಅವರು ರಾಜಸ್ಥಾನದ ನಾಥದ್ವಾರದಲ್ಲಿರುವ ನಾಥದ್ವಾರ ಮಂದಿರಕ್ಕೆ ಭೇಟಿ ಕೊಟ್ಟು, ಭಗವಾನ್ ಶ್ರೀನಾಥಜಿಯವರ ಭೋಗ ಆರತಿ ದರ್ಶನ ಪಡೆದರು. ನಂತರ ಗುರು ವಿಶಾಲ್ ಬಾವಾ ಸಾಹೇಬ್ ಅವರಿಂದ ಆಶೀರ್ವಾದ ಪಡೆದರು.
ಈ ಭೇಟಿ ವೇಳೆ ಅವರು ನಾಥದ್ವಾರದಲ್ಲಿ ಯಾತ್ರಿಕರ ಅನುಕೂಲಕ್ಕಾಗಿ ಸುಸಜ್ಜಿತ ವ್ಯವಸ್ಥೆಯುಳ್ಳ ಅತ್ಯಾಧುನಿಕ ‘ಯಾತ್ರಿ ಏವಂ ವರಿಷ್ಠ ಸೇವಾ ಸದನ’ ಕೇಂದ್ರ ನಿರ್ಮಿಸುವ ಘೋಷಣೆ ಮಾಡಿದರು. ಸುಮಾರು 50 ಕೋಟಿ ರೂ. ಮೊತ್ತದ ಯೋಜನೆ ಇದಾಗಿದೆ. ಅಲ್ಲದೆ ನಾಥದ್ವಾರ ದೇವಾಲಯಕ್ಕೆ 15 ಕೋಟಿ ರೂ. ದೇಣಿಗೆ ನೀಡಿದರು.
ಈ ಉದ್ದೇಶಿತ ಸೇವಾ ಸದನದಲ್ಲಿ100ಕ್ಕೂ ಹೆಚ್ಚು ಕೊಠಡಿಗಳು ಇರಲಿವೆ. 24 ಗಂಟೆಗಳ ವೈದ್ಯಕೀಯ ಘಟಕ, ಸತ್ಸಂಗ ಮತ್ತು ಪ್ರವಚನ ಸಭಾಂಗಣ, ಪ್ರಸಾದ ವ್ಯವಸ್ಥೆ ಹಾಗೂ ಭಕ್ತರಿಗೆ ಸುರಕ್ಷಿತ ಮತ್ತು ಆರಾಮದಾಯಕ ಸೌಕರ್ಯಗಳು ಇರಲಿವೆ.
ಮುಕೇಶ್ ಅಂಬಾನಿ ಅವರು ತಿರುಪತಿಗೆ ಭೇಟಿ ನೀಡಿ ತಿಮ್ಮಪ್ಪನ ದರ್ಶನ ಪಡೆದರು. ತಿರುಮಲದಲ್ಲಿ ವೆಂಕಟೇಶ್ವರ ಪ್ರಸಾದ ಟ್ರಸ್ಟ್ಗೆ ಸಮರ್ಪಿತವಾದ ಅತ್ಯಾಧುನಿಕ ಅಡುಗೆಮನೆ ನಿರ್ಮಿಸುವ ಘೋಷಣೆ ಮಾಡಿದರು. ಟಿಟಿಡಿ ಸಹಭಾಗಿತ್ವ ಮತ್ತು ಆಂಧ್ರಪ್ರದೇಶ ಸರಕಾರದ ಬೆಂಬಲದೊಂದಿಗೆ ಈ ಉಪಕ್ರಮ ಕೈಗೊಳ್ಳುತ್ತಿದೆ ಎಂದು ಪ್ರಕಟಣೆ ತಿಳಿಸಿದೆ. ಹೊಸ ಯಾಂತ್ರೀಕೃತ ಅಡುಗೆಮನೆಯು ಪ್ರತಿದಿನ 2 ಲಕ್ಷ ಜನರಿಗೆ ಪ್ರಸಾದ ತಯಾರಿಸುವ ಸಾಮರ್ಥ್ಯ ಹೊಂದಿದೆ.
ಗುರುವಾಯೂರು ಮಂದಿರಕ್ಕೆ 15 ಕೋಟಿ ರೂ: ಮುಕೇಶ್ ಅಂಬಾನಿ ಅವರು ಕೇರಳದ ಗುರುವಾಯೂರು ಕೃಷ್ಣ ದೇವಸ್ಥಾನ ಭೇಟಿ ಕೊಟ್ಟು ಪೂಜೆ ಸಲ್ಲಿಸಿದರು. ಈ ವೇಳೆ ಅವರು ದೇವಸ್ಥಾನ ಮಂಡಳಿಯ ಉದ್ದೇಶಿತ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಹಾಗೂ ಪಶು ಆಸ್ಪತ್ರೆ ನಿರ್ಮಾಣಕ್ಕೆ 15 ಕೋಟಿ ರೂ. ದೇಣಿಗೆ ನೀಡಿದರು




