ಗುರುವಿನ ಗುಲಾಮನಾಗದೇ ದೊರೆಯದಣ್ಣ ಮುಕುತಿ

Share with

ಗುರು ಭಾರತೀಯ ಪರಂಪರೆಯಲ್ಲಿ ಬಹಳ ಗೌರವಯುತ ಮತ್ತು ಘನತೆಯುಳ್ಳ ಪದ ಹಾಗೂ ಪದವಿ. ಆಚಾರ್ಯ ದೇವೋ ಭವ ಅನ್ನುವಂತೆ ಹಿಂದಿನ ಕಾಲದಿಂದ ಶುರುವಾಗಿ ಇಂದಿನ ಆಧುನಿಕ ಯುಗದವರೆಗೂ ದೈವಿ ಸ್ವರೂಪರಾಗಿಯೇ ಉಳಿದವರೆಂದರೇ ಅದು ಗುರುಗಳು ಮಾತ್ರ. ಜಾತಿ-ಮತ, ಮೇಲು-ಕೀಳು, ಬಡವ-ಬಲ್ಲಿದ ಅನ್ನುವ ತಾರತಮ್ಯ ಮಾಡದೇ ತನ್ನೆಲ್ಲ ಶಿಷ್ಯರನ್ನೂ ಸ್ವಂತ ಮಕ್ಕಳಂತೆ ಭಾವಿಸಿ ತಾನು ಕಲಿತಂಥಹ ವಿದ್ಯೆ, ಸಂಸ್ಕಾರ ಮತ್ತು ಆಚರಣೆಗಳನ್ನು ಬಹಳ ಪ್ರೀತಿ, ಕಾಳಜಿ ಮತ್ತು ಜವಾಬ್ದಾರಿಯುತವಾಗಿ  ಭೋದಿಸಿ ಅವರುಗಳ ವ್ಯಕ್ತಿತ್ವವನ್ನು ರೂಪಿಸಿ, ಅಜ್ಞಾನವನ್ನು ಹೋಗಲಾಡಿಸಿ ಜ್ಞಾನದ ಬೆಳಕಿನೆಡೆಗೆ ಕೈಹಿಡಿದು ಕರೆದುಕೊಂಡು ಹೋಗಿ ಸಮಾಜದಲ್ಲಿ ಒಬ್ಬ ಗಣ್ಯ ಆದರ್ಶ ವ್ಯಕ್ತಿಯನ್ನಾಗಿ ಮಾಡುವ ಅದ್ಭುತ ಶಕ್ತಿಯೇ ಗುರು.

ಗುರು ಎಂದರೆ ಕೇವಲ ಶಾಲೆಗಳಲ್ಲಿ ಅಕ್ಷರ ಹೇಳಿಕೊಡುವ ಗುರುಗಳಷ್ಟೇ ಅಲ್ಲ. ಮನೆಯಲ್ಲಿರುವ ತಾಯಿ-ತಂದೆ ಹಿರಿಯ ಜೀವಗಳು, ಒಡಹುಟ್ಟಿದವರು , ಬಂಧು ಬಳಗದವರು, ಸ್ನೇಹಿತರು, ದಿನಾಲೂ ನಾವು ನೋಡುವ ಮಾತಾಡಿಸುವ ವ್ಯಕ್ತಿಗಳು, ಸಮಾಜದಲ್ಲಿ ಎತ್ತರದಲ್ಲಿರುವ ಗಣ್ಯ ವ್ಯಕ್ತಿಗಳು ಮತ್ತು ಮಹನೀಯರನ್ನೂ ಸಹ ಗುರುಗಳಾಗಿ ಭಾವಿಸಿದರೆ, ಮನುಷ್ಯ ಬಹಳ ಎತ್ತರಕ್ಕೆ ಏರಬಹುದು. “ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎನ್ನುವಂತೆ ಏನೂ ತಿಳಿಯದ ಒಬ್ಬ ಸಾಮಾನ್ಯ ಮನುಷ್ಯನಿಗೆ ಜೀವನದ ಮೌಲ್ಯಗಳು, ಜೀವನದ ಅರ್ಥ, ಗುರಿ ಆ ಗುರಿಯನ್ನು ಸಾಧಿಸಲು ಇರುವ ಮಾರ್ಗ ಮುಂತಾದವುಗಳನ್ನು ಗುರುವಿನ ಮಾರ್ಗದರ್ಶನವಿಲ್ಲದೆ ಅರಿಯಲು ಸಾಧ್ಯವಿಲ್ಲ.
ಯಾವಾಗ ಗುರುವಿನಿಂದ ಕಲಿತ ಈ ಎಲ್ಲ ವಿದ್ಯೆಗಳನ್ನು ಉಪಯೋಗಿಸಿಕೊಂಡು ನಾವು ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಯಾಗಿ ಬಿಂಬಿತರಾಗುತ್ತೇವೋ ಅದುವೇ ಗುರುಗಳಿಗೆ  ನೀಡುವ ಗುರುದಕ್ಷಿಣೆಯಾಗಿರುತ್ತದೆ. ಗುರುವನ್ನು ಪ್ರೀತಿಸೋಣ ಗುರುವನ್ನು ಗೌರವಿಸೋಣ.


Share with

Leave a Reply

Your email address will not be published. Required fields are marked *