ಮುಳ್ಳಯ್ಯನಗಿರಿ, ಚಾರ್ಮಾಡಿ ಪ್ರವಾಸ ಕೈಗೊಂಡಿದ್ದೀರಾ..? ಹಾಗಿದ್ರೆ ಈ ವರದಿ ನೋಡಿ

Share with

ಚಿಕ್ಕಮಗಳೂರು: ಮುಳ್ಳಯ್ಯನಗಿರಿ, ಚಂದ್ರದ್ರೋಣ ಪರ್ವತ ಸಾಲು, ಚಾರ್ಮಾಡಿ ಘಾಟಿ ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯ ಪರಿಸರ ಸೂಕ್ಷ್ಮ ಪ್ರದೇಶಗಳ ಬಗ್ಗೆ ಜಿಯೋಲಾಜಿಕಲ್ ಸರ್ವೇ ತಂಡ ಸಮೀಕ್ಷೆ ನಡೆಸಿದ್ದು, ವರದಿ ಸಿದ್ಧಪಡಿಸಿದೆ. ಇದೀಗ ವರದಿಯನ್ನು ಚಿಕ್ಕಮಗಳೂರು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಗಿದೆ. ಜಿಲ್ಲಾಧಿಕಾರಿ ಮೀನಾ ನಾಗರಾಜ್​ಗೆ ವರದಿ ಸಲ್ಲಿಸಲಾಗಿದೆ. ಅನೇಕ ಆಘಾತಕಾರಿ ಅಂಶಗಳು ವರದಿಯಲ್ಲಿ ಉಲ್ಲೇಖವಾಗಿರುವುದು ತಿಳಿದುಬಂದಿದೆ.

ಅವೈಜ್ಞಾನಿಕ ಕಾಮಗಾರಿ, ವಾಹನಗಳ ಅತಿಯಾದ ದಟ್ಟಣೆ, ಅತಿಹೆಚ್ಚು ಮಳೆಯಿಂದ ಗುಡ್ಡ, ಭೂ ಕುಸಿತಗಳು ಸಂಭವಿಸುತ್ತಿವೆ. ಮುಳ್ಳಯ್ಯನಗಿರಿ, ಚಂದ್ರದ್ರೋಣ ಪರ್ವತದ ಸಾಲು, ಚಾರ್ಮಾಡಿ ಘಾಟಿ ಬಹಳ ಅಪಾಯಕಾರಿ ಪ್ರದೇಶಗಳಾಗಿ ಪರಿಣಮಿಸಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮುಳ್ಳಯ್ಯನಗಿರಿ, ಚಂದ್ರದ್ರೋಣ ಪರ್ವತದ ಸಾಲುಗಳಲ್ಲಿ ವಾಹನ ದಟ್ಟಣೆ ಕಡಿಮೆ ಮಾಡುವಂತೆ ವರದಿಯಲ್ಲಿ ಸಲಹೆ ನೀಡಲಾಗಿದೆ. ಶೇ 80ರಷ್ಟು ಅವೈಜ್ಞಾನಿಕ ಕಾಮಗಾರಿಯಿಂದ ಪಶ್ಚಿಮ ಘಟ್ಟಗಳ ಸಾಲು, ಮಲೆನಾಡು ಭಾಗದಲ್ಲಿ ಭೂಕುಸಿತದ ಭೀತಿ ಉಂಟಾಗಿದೆ ಎಂದು ವರದಿ ತಿಳಿಸಿದೆ.

ಚಿಕ್ಕಮಗಳೂರಿನಲ್ಲಿ 88 ಅಪಾಯಕಾರಿ ಸ್ಥಳಗಳು

ಅಷ್ಟೇ ಅಲ್ಲದೆ, ಚಿಕ್ಕಮಗಳೂರು ಜಿಲ್ಲೆಯ 88 ಅಪಾಯಕಾರಿ ಸ್ಥಳಗಳ ಬಗ್ಗೆ ವರದಿಯಲ್ಲಿ ಮಾಹಿತಿ ನೀಡಲಾಗಿದೆ. ಮುಳ್ಳಯ್ಯನಗಿರಿ, ಚಂದ್ರದ್ರೋಣ ಪರ್ವತ ಸಾಲು, ಚಾರ್ಮಾಡಿ ಘಾಟಿ ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯಲ್ಲಿ 88 ಅತ್ಯಂತ ಅಪಾಯಕಾರಿ ಸ್ಥಳಗಳಿವೆ ಎಂದು ಉಲ್ಲೇಖಿಸಿರುವ ವರದಿ, ಆ ಸ್ಥಳಗಳ ಹೆಸರು ಉಲ್ಲೇಖಿಸಿದೆ.

ಅವೈಜ್ಞಾನಿಕ ಕಾಮಗಾರಿಗಳೇ ಅನಾಹುತಗಳಿಗೆ ಕಾರಣ

ಅವೈಜ್ಞಾನಿಕ ಕಾಮಗಾರಿಗಳಿಂದ ಗುಡ್ಡ, ಭೂ ಕುಸಿತ ಸಂಭವಿಸುತ್ತಿದ್ದು, ವೈಜ್ಞಾನಿಕ ರೀತಿಯಲ್ಲಿ ರಸ್ತೆ ಕಾಮಗಾರಿ ಮಾಡದೆ ಅವಾಂತರ ಸೃಷ್ಟಿಯಾಗಿದೆ ಎಂದು ವರದಿ ಹೇಳಿದೆ. ಅತಿಹೆಚ್ಚು ಕಾಮಗಾರಿಗಳಿಂದ ಪಶ್ಚಿಮ ಘಟ್ಟಗಳ ಸಾಲಿಗೆ ಹಾನಿಯಾಗುತ್ತಿದೆ ಎಂದು ಹೇಳಿದೆ.

ಒಂದು ವಾರ ಕಾಲ ಚಿಕ್ಕಮಗಳೂರು ಜಿಲ್ಲೆಯಲ್ಲಿ ತಂಡ ಸರ್ವೇ ನಡೆಸಿತ್ತು. ಇದೀಗ ಅಂತಿಮವಾಗಿ ವರದಿ ಸಲ್ಲಿಕೆ ಮಾಡಿದೆ. ಸರ್ಕಾರದ ಮುಂದಿನ ಕ್ರಮಗಳೇನು ಎಂಬುದನ್ನು ಕಾದುನೋಡಬೇಕಿದೆ. ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಮತ್ತೆ ಭೂಕುಸಿತ ಸಂಭವಿಸಿದೆ. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಚಿಕ್ಕಮಗಳೂರು ಜಿಲ್ಲೆಯ ಎನ್​.ಆರ್​.ಪುರ ತಾಲೂಕಿನ ಬನ್ನೂರು ಗ್ರಾ.ಪಂ. ವ್ಯಾಪ್ತಿಯ ಜಕನಕ್ಕಿ ಗ್ರಾಮದ ಬಳಿ ಭೂಕುಸಿತ ಸಂಭವಿಸಿದೆ. ಸಂಪೂರ್ಣ ರಸ್ತೆ ಕುಸಿಯುವ ಆತಂಕದಲ್ಲಿವ ಸ್ಥಳೀಯರಿದ್ದಾರೆ. ಬಾಳೆಹೊನ್ನೂರಿನಿಂದ ಜಕನಕ್ಕಿ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಇದಾಗಿದೆ.


Share with

Leave a Reply

Your email address will not be published. Required fields are marked *