ಜೀವಂತ ಕಪ್ಪೆಯ ಮೈಮೇಲೆ ಅಣಬೆ ಮೊಳಕೆ; ಜಗತ್ತಿನಲ್ಲಿಯೇ ಮೊದಲ ದಾಖಲೆ

Share with

ಉಡುಪಿ: ಜೀವಂತ ಕಪ್ಪೆಯ ಮೈಮೇಲೆ ಅಣಬೆಯೊಂದು ಮೊಳಕೆ ಯೊಡೆದು ಬೆಳೆದಿರುವ ಅಪರೂಪದ ವಿಸ್ಮಯಕಾರಿ ವಿದ್ಯಾಮಾನವೊಂದು ಕಾರ್ಕಳ ತಾಲೂಕಿನ ಮಾಳ ಗ್ರಾಮದಲ್ಲಿ ನಡೆದಿದೆ.
ಕರ್ನಾಟಕ ಮತ್ತು ಕೇರಳ ಪಶ್ಚಿಮಘಟ್ಟಗಳಲ್ಲಿ ಸ್ಥಳೀಯವಾಗಿ ಮಾತ್ರ ಕಂಡು ಬರುವ ‘ಗೋಲ್ಡನ್ ಬ್ಯಾಕ್ಡ್ ಫ್ರಾಗ್’ ಜಾತಿಯ ಕಪ್ಪೆಯ ಎಡ ಪಾರ್ಶ್ವದಲ್ಲಿ ಅಣಬೆ ಮೊಳಕೆ ಒಡೆದಿರುವುದು ಕಂಡುಬಂದಿದೆ.
ಗೋಲ್ಡನ್ ಬ್ಯಾಕ್ಡ್ ಕಪ್ಪೆಮೇಲೆ ಬೆಳೆದಿರುವ ಅಣಬೆ ಯನ್ನು ಮೈಸಿನ ಅಥವಾ ಬಾನೆಟ್ ಮಶ್ರೂಮ್ ಎಂದು ಗುರುತಿಸಲಾಗಿದೆ. ಈ ಅಣಬೆ ಕೊಳೆತ ಮರದ ಮೇಲಷ್ಟೇ ಬೆಳೆಯುತ್ತದೆ. ಆದರೆ ಇಲ್ಲಿ ಒಂದು ಜೀವಂತ ಜೀವಿಯ ಮೇಲೆ ಅಣಬೆ ಬೆಳೆದಿರುವುದು ಜಗತ್ತಿನಲ್ಲಿಯೇ ಮೊದಲ ದಾಖಲೆಯಾಗಿದೆ. ಈ ಅದ್ಭುತವು ಇಡೀ ವಿಜ್ಞಾನ ಲೋಕವನ್ನೇ ನಿಬ್ಬೆರಗು ಗೊಳಿಸಿದೆ ಎನ್ನುತ್ತಾರೆ ಪರಿಸರ ತಜ್ಞ ಲೋಹಿತ್ ವೈ.ಟಿ.
ಉಭಯಚರ ಜೀವಿಗಳಿಗೆ ಕೆಲವೊಂದು ಫಂಗೈಗಳಿಂದ ಕಾಯಿಲೆಗಳು ಸಂಭವಿಸಿ ಸಾಯುತ್ತವೆ. ಅಂತಹ ಸಮಸ್ಯೆ ಕೀಟ ಮತ್ತು ಜೇಡಗಳಲ್ಲೂ ಕಾಣ ಬಹುದು. ಆದರೆ ಜೀವಂತ ಕಪ್ಪೆಯ ಮೇಲಿನ ಅಣಬೆ ಇನ್ನಷ್ಟು ವೈಜ್ಞಾನಿಕ ಸಂಶೋಧನೆಗಳಿಗೆ ದಾರಿ ಮಾಡಿಕೊಟ್ಟಿದೆ. ಇದಕ್ಕೆ ನಿಖರವಾದ ಕಾರಣವನ್ನು ಈವರೆಗೂ ಕಂಡುಕೊಳ್ಳಲು ಸಾಧ್ಯವಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
ಕೊಳೆತ ವಸ್ತುಗಳ ಮೇಲೆ ಬೆಳೆಯುವ ಅಣಬೆಗಳು ಅದರಲ್ಲಿನ ಅಂಶಗಳನ್ನು ತೆಗೆದುಕೊಂಡು ಬೆಳೆಯುತ್ತದೆ. ಆದರೆ ಕಪ್ಪೆಯ ಮೇಲೆ ಮೊಳಕೆ ಒಡೆದಿರುವ ಅಣಬೆ ಯಾವ ಆಹಾರ ಸೇವಿಸುತ್ತಿದೆ ಎಂಬುದು ಗೊತ್ತಾಗಿಲ್ಲ. ಅಣಬೆಯು ಕಪ್ಪೆಯ ಮಾಂಸ ಅಥವಾ ರಕ್ತವನ್ನು ಆಹಾರವನ್ನಾಗಿ ಬಳಸಿಕೊಂಡಿತ್ತೆ ಎಂಬುದು ಪ್ರಯೋಗಾಲಯದಲ್ಲಿಯೇ ಸಾಬೀತಾಗಬೇಕು. ಇದರ ಬಗ್ಗೆ ಹೆಚ್ಚಿನ ಅಧ್ಯಯನ ಅಗತ್ಯವಾಗಿ ಆಗಬೇಕು. ಕಪ್ಪೆಯನ್ನು ಹಿಡಿದು ಪ್ರಾಯೋಗಾಲಯ ದಲ್ಲಿ ಪರೀಕ್ಷೆಗೆ ಒಳಪಡಿಸುತ್ತಿದ್ದರೆ ಹೆಚ್ಚಿನ ಮಾಹಿತಿ ಸಿಗುತ್ತಿತ್ತು ಎನ್ನುತ್ತಾರೆ ಲೋಹಿತ್ ವೈ.ಟಿ.


Share with

Leave a Reply

Your email address will not be published. Required fields are marked *