ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾದ್ಯಂತ ಸೆ.22ರಂದು ದಸರಾ ಸಂಭ್ರಮ ಆರಂಭಗೊಳ್ಳಲಿದೆ. ಜಿಲ್ಲೆಯ ವಿವಿಧ ದೇಗುಲಗಳನ್ನು ವಿದ್ಯುತ್ ದೀಪ, ಹೂವು, ತಳಿರು ತೋರಣಗಳಿಂದ ಅಲಂಕರಿಸಲಾಗಿದೆ.

ದ.ಕ. ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯಲಿದೆ. ಪುರಾಣ ಪ್ರಸಿದ್ಧ ಶ್ರೀ ಮಂಗಳಾದೇವಿ ದೇವಸ್ಥಾನ, ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನ, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಸಹಿತ ವಿವಿಧ ದೇವಿ ಆಲಯಗಳಲ್ಲಿ ಪೂಜೆ ನೆರವೇರಲಿದೆ.
ಮಂಗಳೂರು ದಸರಾ ಖ್ಯಾತಿಯ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ನವರಾತ್ರಿ ವಿಜೃಂಭಣೆಯಿಂದ ನೆರವೇರಲಿದೆ. ದಸರಾ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ, ಸರಕಾರಿ, ಖಾಸಗಿ ಕಟ್ಟಡಗಳನ್ನು ವಿದ್ಯುತ್ ದೀಪಾಲಂಕಾರಗೊಳಿಸಲಾಗಿದೆ. ಶಾಲೆಗಳಿಗೆ ರಜೆ ನೀಡಲಾಗಿದೆ.
ಉಡುಪಿ ಜಿಲ್ಲೆಯ ದೇವಸ್ಥಾನಗಳಲ್ಲೂ ನವರಾತ್ರಿ ಉತ್ಸವ ರಂಗು ಪಡೆಯಲಿದೆ.
ಉಡುಪಿ-ಉಚ್ಚಿಲ-2025 ಸಂಭ್ರಮದ ದಸರಾ ಉತ್ಸವಕ್ಕೆ ಸಕಲ ಸಿದ್ಧತೆಗಳೊಂದಿಗೆ ಸಜ್ಜಾಗಿದೆ. ಹಾಗೆಯೇ ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನ, ಕನ್ನರ್ಪಾಡಿ ಶ್ರೀ ಜಯದುರ್ಗಾ ಪರಮೇಶ್ವರೀ ದೇವಸ್ಥಾನ, ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನ, ದೊಡ್ಡಣಗುಡ್ಡೆಯ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ, ಇಂದ್ರಾಳಿಯ ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನ, ಬೈಲೂರು ಮಹಿಷಮರ್ದಿನಿ ದೇವಸ್ಥಾನ, ಕಾಮಕ್ಷಿ ದೇವಿ ದೇಗುಲ, ಪುತ್ತೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ತೋನ್ಸೆ ಖಂಡಿಗೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಕೆಮ್ಮಣ್ಣು ಶ್ರೀ ಭದ್ರಕಾಳಿ ಮಹಾಮಾರಿಕಾಂಬ ದೇವಸ್ಥಾನ, ಸನ್ಯಾಸಿಮಠ ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ವಿಜೃಂಭಣೆಯಿಂದ ಸಂಪನ್ನಗೊಳ್ಳಲಿದೆ.




