ಪೆರ್ಲ: ನೇತಾಜಿ ಫ್ರೆಂಡ್ಸ್ ಸರ್ಕಲ್ ಹಾಗೂ ನೇತಾಜಿ ಪಬ್ಲಿಕ್ ಲೈಬ್ರರಿ ಪೆರ್ಲ ಇದರ ಆಶ್ರಯದಲ್ಲಿ “ಓಣಂ 2023” ಓಣಂ ಆಚರಣೆ ಜರಗಿತು. ಬೆಳಗ್ಗೆ ಒಂಬತ್ತು ಗಂಟೆಗೆ ಸರಿಯಾಗಿ ಮಕ್ಕಳಿಗೆ ಮಹಿಳೆಯರಿಗೆ ಹಾಗೂ ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು.
ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಹೂವಿನ ರಂಗೋಲಿ ಸ್ಪರ್ಧೆ ಕೂಡ ಜರಗಿತು. ಇದರಲ್ಲಿ ಶೈನಿಂಗ್ ಸ್ಟಾರ್ ಬೆದ್ರಂಪಳ್ಳ ಪ್ರಥಮ ಸ್ಥಾನ ಪಡೆಯಿತು. ಮಧ್ಯಾಹ್ನ ಓಣಂ ಸದ್ಯ ವಿತರಿಸಲಾಯಿತು. ಸುಮಾರು ಮೂರು ಸಾವಿರ ಮಂದಿ ಜಾತಿ ಭೇದ ಮರೆತು ಒಟ್ಟಿಗೆ ಓಣಂ ಸದ್ಯ ಸವಿದದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ನಂತರ ಸಭಾ ಕಾರ್ಯಕ್ರಮ ಜರಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಮಂಜೇಶ್ವರ ತಾಲ್ಲೂಕು ಲೈಬ್ರರಿ ಉಪಾಧ್ಯಕ್ಷ ಶ್ರೀಯುತ ಶ್ಯಾಮ್ ಭಟ್ ನೆರವೇರಿಸಿದರು.
ಇವರು ಮಾತನಾಡಿ ‘3000 ಮಂದಿ ಓಣಂ ಸದ್ಯ ಸವಿದದ್ದು ಕೇರಳದಲ್ಲಿ ಮೊಟ್ಟಮೊದಲಾಗಿರಬಹುದು ಅಲ್ಲದೆ ಜಾತಿಭೇದ ಮರೆತು ನಾವೆಲ್ಲರೂ ಒಟ್ಟಿಗೆ ಹಬ್ಬಗಳನ್ನು ಆಚರಿಸಿದಲ್ಲಿ ಈ ಕೇರಳ ಸುಂದರವಾಗಬಹುದು’ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಲಬ್ಬಿನ ಅಧ್ಯಕ್ಷರಾದ ಶ್ರೀಯುತ ಚಂದ್ರಹಾಸ ಶೆಟ್ಟಿ ವಹಿಸಿದರು. ಕಾರ್ಯಕ್ರಮಕ್ಕೆ ಎಸ್ಎನ್ಎಚ್ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಯುತ ರಾಜೇಂದ್ರ ಬಿ, ನಿವೃತ್ತ ಸಬ್ ರಿಜಿಸ್ಟರ್ ಶ್ರೀಯುತ ಮೊಹಮ್ಮದ್ ಆಲಿ ಪೆರ್ಲ , ಕಾಸರಗೋಡು ಜಿಲ್ಲಾ ಲೈಬ್ರರಿ ಕೌನ್ಸಿಲ್ ನ ಸದಸ್ಯರಾದ ಶ್ರೀಯುತ ಸುಧಾಕರ ಮಾಸ್ತರ್, ಪಬ್ಲಿಕ್ ಪ್ರಾಸಿಕ್ಯೂಟರ್ ಶ್ರೀಯುತ ಚಂದ್ರಮೋಹನ ಕಾಟುಕುಕ್ಕೆ ಶುಭ ಕೋರಿದರು.
ಈ ಕಾರ್ಯಕ್ರಮದಲ್ಲಿ ಪ್ರಖ್ಯಾತ ಯಕ್ಷಗಾನ ಕಲಾವಿದ ಡಾ. ಸತೀಶ್ ಪುಣಿಚಿತ್ತಾಯ ಹಾಗೂ ಪ್ರಸಿದ್ಧ ಶಿಲ್ಪಿ ಚಂದ್ರಹಾಸ ಪೆರ್ಲ ಇವರಿಗೆ ಶಾಲು ಫಲ ಪುಷ್ಪ ಹಾಗೂ ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. 2023 ನೇ ಸಾಲಿನ ಎಸ್. ಎಲ್. ಸಿ ಉನ್ನತ ವಿಜಯಿಗಳನ್ನು ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.
ಕಾರ್ಯಕ್ರಮಕ್ಕೆ ಕ್ಲಬ್ಬಿನ ಕಾರ್ಯದರ್ಶಿ ಶ್ರೀರಾಜ್ ಸ್ವಾಗತ ಅರ್ಪಿಸಿದರೆ ಕ್ಲಬ್ಬಿನ ಕೋಶಾಧಿಕಾರಿ ರಾಜೇಶ್ ಬಿ ಧನ್ಯವಾದ ಸಮರ್ಪಿಸಿದರು. ಕ್ಲಬ್ಬಿನ ಸದಸ್ಯ ಸಂಜೀವ ಮಾಸ್ತರ್ ಕಾರ್ಯಕ್ರಮ ನಿರೂಪಿಸಿದರು. ಕ್ಲಬ್ಬಿನ ಸದಸ್ಯರಿಂದ ವಿವಿಧ ವಿನೋದಾವಳಿಗಳು ಪ್ರದರ್ಶಿಸಲ್ಪಟ್ಟಿತು. ನಂತರ ರಾತ್ರಿ ವಿಶೇಷ ಆಕರ್ಷಣೆಯಾಗಿ ಆಧೀನ ನಾಟಕ ನಾಟರಿವ್ ವೀಡು ಮಯ್ಯಿಲ್ ಕಣ್ಣೂರ್ ಇವರಿಂದ “ನಾಟ್ ಮೋಳಿ ” ಜಾನಪದ ಹಾಡು ಮೇಳ ಜರಗಿತು . ವಿವಿಧ ಶೈಲಿಯ ಜಾನಪದ ಹಾಡುಗಳು ಜನರ ಆಕರ್ಷಣೆಗಳಿಸಿತು. ಇದರೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.