ಯೆಮೆನ್: ಕೊಲೆ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿ ಮರಣದಂಡನೆಗೆ ಗುರಿಯಾಗಿರುವ ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾಗೆ ಬಿಗ್ ರಿಲೀಫ್ ಸಿಕ್ಕಿದೆ. ಯೆಮೆನ್‌ನಲ್ಲಿ ಜೈಲಿನಲ್ಲಿರುವ ನಿಮಿಷಾ ಪ್ರಿಯಾ ಅವರ ಗಲ್ಲು ಶಿಕ್ಷೆ ರದ್ದುಗೊಂಡಿದ್ದು, ಅವರನ್ನು ತಕ್ಷಣ ಬಿಡುಗಡೆ ಮಾಡಲಾಗುತ್ತದೆ. ಕ್ರಿಶ್ಚಿಯನ್ ಧರ್ಮೋಪದೇಶಕ ಕೆಎ ಪಾಲ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದ್ದಾರೆ. ಯೆಮೆನ್ ರಾಜಧಾನಿ ಸನಾದಲ್ಲಿ ಜೈಲಿನಲ್ಲಿರುವ ಭಾರತೀಯ ನರ್ಸ್ ನಿಮಿಷಾ ಪ್ರಿಯಾ ಅವರ ಮರಣದಂಡನೆಯನ್ನು ರದ್ದುಗೊಳಿಸಲಾಗಿದೆ ಎಂದು ಅವರು ಮಂಗಳವಾರ ರಾತ್ರಿ ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ. ಇದೇ ವೇಳೆ ನಿಮಿಷಾ ಪ್ರಿಯಾ ಅವರನ್ನು ಉಳಿಸಿಕೊಳ್ಳಲು ಭಾರತ ಸರ್ಕಾರ ಮತ್ತು ಮೋದಿ ನಡೆಸಿದ ಪ್ರಯತ್ನಗಳನ್ನು ಶ್ಲಾಘಿಸಿದರು.
ಡಾ.ಕೆ.ಎ ಪಾಲ್ ವಿಡಿಯೊ ಸಂದೇಶದಲ್ಲೇನಿದೆ?
ಇನ್ನು ಡಾ.ಕೆ.ಎ. ಪಾಲ್ ರಿಲೀಸ್ ಮಾಡಿರುವ ವಿಡಿಯೊದಲ್ಲಿ ನಿಮಿಷಾ ಪ್ರಿಯಾ ಅವರ ಮರಣದಂಡನೆಯನ್ನು ರದ್ದುಗೊಳಿಸಲು ಸಹಾಯ ಮಾಡಿದ ಎಲ್ಲಾ ನಾಯಕರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದಿದ್ದಾರೆ. ದೇವರ ಆಶೀರ್ವಾದದಿಂದ, ನಿಮಿಷಾ ಪ್ರಿಯಾ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದಾರೆ ಮತ್ತು ಶೀಘ್ರದಲ್ಲೇ ಅವರು ಭಾರತಕ್ಕೆ ಹಿಂತಿರುಗುತ್ತಾರೆ. ನಿಮಿಷಾ ಪ್ರಿಯಾ ಅವರನ್ನು ಕರೆದೊಯ್ಯಲು ರಾಜತಾಂತ್ರಿಕರನ್ನು ಕಳುಹಿಸುತ್ತಿರುವ ಪ್ರಧಾನಿ ಮೋದಿ ಅವರಿಗೂ ನಾನು ಧನ್ಯವಾದ ಹೇಳುತ್ತೇನೆ ಎಂದಿದ್ದರು.
ಕಳೆದ ವಾರ, ಭಾರತೀಯ ವಿದೇಶಾಂಗ ಸಚಿವಾಲಯವು ನಿಮಿಷಾ ಪ್ರಿಯಾ ಅವರನ್ನು ಉಳಿಸಲು ಸರ್ಕಾರ ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂಬುದನ್ನು ಹೇಳಿಕೆಯಲ್ಲಿ ತಿಳಿಸಿದೆ. ನಿಮಿಷಾ ಪ್ರಿಯಾ ಅವರ ಕುಟುಂಬಕ್ಕೆ ಸಹಾಯ ಮಾಡಲು ಸರ್ಕಾರ ಒಬ್ಬ ವಕೀಲರನ್ನು ನೇಮಿಸಿದ್ದು, ಅವರು ಯೆಮೆನ್ ಕಾನೂನಿನ ಪ್ರಕಾರ ಅವರಿಗೆ ಸಹಾಯ ಮಾಡುತ್ತಿದ್ದಾರೆ. ಇದರೊಂದಿಗೆ, ಷರಿಯಾ ಕಾನೂನಿನಡಿಯಲ್ಲಿ ನಿಮಿಷಾ ಅವರಿಗೆ ಕ್ಷಮಾದಾನ ನೀಡುವ ಪ್ರಯತ್ನಗಳ ಬಗ್ಗೆಯೂ ಮಾಹಿತಿ ನೀಡಲಾಯಿತು.