ಪಾಕಿಸ್ತಾನದ ಸಿಪೆಕ್ಗೆ ಚೀನಾ ಫಂಡಿಂಗ್ ಇಲ್ಲ; ಉಗ್ರರ ಉಪಟಳಕ್ಕೆ ಹೆದರಿತಾ? ಚೀನಾ ಸಾಲ ಕೊಡದೇ ಇರಲು ಏನು ಕಾರಣ?

Share with

ನವದೆಹಲಿ, ನವೆಂಬರ್ 11: ಹಲವು ವರ್ಷಗಳಿಂದ ಪೂರ್ಣಗೊಳಿಸಲು ಆಗದೆ ಒದ್ದಾಡುತ್ತಿರುವ ಪಾಕಿಸ್ತಾನಕ್ಕೆ ಈ ಹತಾಶೆಯ ಪರಿಸ್ಥಿತಿ ಮುಂದುವರಿಯುವಂತಿದೆ. ಅದರ ಸಿಪೆಕ್ ಯೋಜನೆಗೆ ಫಂಡಿಂಗ್ ಕೊಡಲು ಚೀನಾ (China) ಹಿಂದೇಟು ಹಾಕುತ್ತಿದೆ. ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಅವರ ಇತ್ತೀಚಿನ ಚೀನಾ ಭೇಟಿಯಲ್ಲಿ ಹೆಚ್ಚೇನೂ ಗೀಟಿದಂತಿಲ್ಲ. ಚೀನಾ ಪಾಕಿಸ್ತಾನ್ ಎಕನಾಮಿಕ್ ಕಾರಿಡಾರ್ (CPEC- China Pakistan Economic Corridor) ಎರಡನೇ ಹಂತದ ಯೋಜನೆಗೆ ಚೀನಾದ ಫಂಡಿಂಗ್ ಸಿಗದೆ ಷರೀಫ್ ವಾಪಸ್ಸಾಗಿದ್ದಾರೆ.

ಪಾಕಿಸ್ತಾನದಲ್ಲಿ ಕೃಷಿ, ಎಲೆಕ್ಟ್ರಿಕ್ ವಾಹನ, ಸೌರಶಕ್ತಿ, ಆರೋಗ್ಯ, ಉಕ್ಕು ಮೊದಲಾದ ಕೆಲ ಕ್ಷೇತ್ರಗಳಲ್ಲಿ 8.5 ಬಿಲಿಯನ್ ಡಾಲ್ ಮೌಲ್ಯದ ಯೋಜನೆಗಳಿಗೆ ಚೀನಾದ ವಿವಿಧ ಕಂಪನಿಗಳು ಎಂಒಯು ಒಪ್ಪಂದಗಳನ್ನು ಮಾಡಕೊಂಡಿವೆ. ಇದು ಬಿಟ್ಟರೆ ಪ್ರಮುಖ ಹೂಡಿಕೆಗಳು ಚೀನಾದಿಂದ ಪಾಕಿಸ್ತಾನಕ್ಕೆ ಸಿಗುತ್ತಿಲ್ಲ.

ಏನಿದು ಸಿಪೆಕ್ ಯೋಜನೆ?
ಚೀನಾ ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ ಯೋಜನೆಯು ಪಾಕಿಸ್ತಾನದೊಳಗೆ ಮೂಲಸೌಕರ್ಯಗಳನ್ನು ನಿರ್ಮಿಸುವ ಯೋಜನೆಯಾಗಿದೆ. ಚೀನಾದ ಮಹತ್ವಾಕಾಂಕ್ಷಿ ಸಿಲ್ಕ್ ರೋಡ್ ಪ್ರಾಜೆಕ್ಟ್ನ ಒಂದು ಪ್ರಮುಖ ಭಾಗವಾಗಿದೆ ಇದು. ಚೀನಾದ ಶಿನ್ಜಿಯಾಂಗ್ ಪ್ರಾಂತ್ಯದಿಂದ ಪಾಕಿಸ್ತಾನದ ಗ್ವಾದರ್ ಪೋರ್ಟ್ವರೆಗೆ ದೀರ್ಘ ಕಾರಿಡಾರ್ ನಿರ್ಮಿಸುವುದು ಸಿಪೆಕ್ ಯೋಜನೆಯ ಉದ್ದೇಶ.

ಬರೋಬ್ಬರಿ 3,000 ಕಿಮೀ ಉದ್ದದ ಈ ಕಾರಿಡಾರ್ನಲ್ಲಿ ರಸ್ತೆ, ರೈಲ್ವೆ, ಪೈಪ್ಲೈನ್ ನೆಟ್ವರ್ಕ್ಗಳು ಇರಲಿವೆ. ಚೀನಾದಿಂದ ಸರಕುಗಳನ್ನು ಈ ಕಾರಿಡಾರ್ ಮೂಲಕ ಗ್ವಾದರ್ ಪೋರ್ಟ್ಗೆ ಕಳುಹಿಸಿ, ಅಲ್ಲಿಂದ ಮಧ್ಯಪ್ರಾಚ್ಯ, ಸೆಂಟ್ರಲ್ ಏಷ್ಯಾ, ಆಫ್ರಿಕಾ ದೇಶಗಳಿಗೆ ರಫ್ತು ಮಾಡುವುದು ಚೀನಾದ ಉದ್ದೇಶ. ಹೀಗಾಗಿ, ರಸ್ತೆ ಮತ್ತು ರೈಲು ಸಂಪರ್ಕ ಜಾಲವನ್ನು ಬಲಪಡಿಸಲಾಗುತ್ತಿದೆ.

ಸಿಪೆಕ್ ಯೋಜನೆಯ ಕಾಮಗಾರಿಗಳು ಕಳೆದ ಕೆಲ ವರ್ಷಗಳಿಂದ ಬಹಳ ಮಂದಗತಿಯಲ್ಲಿ ಸಾಗಿದೆ. ಎರಡನೇ ಹಂತದ ಯೋಜನೆಯನ್ನು ಜಾರಿಗೆ ತರಲು 60 ಬಿಲಿಯನ್ ಡಾಲರ್ ಹಣ ಪಾಕಿಸ್ತಾನಕ್ಕೆ ಬೇಕಿದೆ. ಚೀನಾ ಬೆಂಬಲಿತ ಯೋಜನೆಯಾದರೂ ಈ ಎಲ್ಲಾ ಕಾಮಗಾರಿಗಳ ವೆಚ್ಚವನ್ನು ಪಾಕಿಸ್ತಾನವೇ ಭರಿಸಬೇಕು. ಚೀನಾ ಈ ಹಿಂದೆ ಸಾಕಷ್ಟು ಸಾಲಗಳನ್ನು ಪಾಕಿಸ್ತಾನಕ್ಕೆ ಕೊಟ್ಟಿದೆ. ಈಗ ಸಾಲ ಕೊಡಲು ಹಿಂದೇಟು ಹಾಕುತ್ತಿದೆ. ಪಾಕಿಸ್ತಾನಕ್ಕೆ ಈಗ ಒಂದು ರೀತಿಯಲ್ಲಿ ನಡುನೀರಲ್ಲಿ ಕೈಬಿಟ್ಟಂತಹ ಸ್ಥಿತಿ ಬಂದಿದೆ.


Share with

Leave a Reply

Your email address will not be published. Required fields are marked *