ಮಂಗಳೂರು: ನೆರೆಯ ಕೇರಳ ರಾಜ್ಯದಲ್ಲಿ ಕೋವಿಡ್ ಹೆಚ್ಚಳದ ಹಿನ್ನೆಲೆಯಲ್ಲಿ ಸಾರ್ವಜನಿಕರು ಭಯಭೀತರಾಗಬೇಡಿ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ|ಎಚ್.ಆರ್ ತಿಮ್ಮಯ್ಯ ಅವರು ತಿಳಿಸಿದ್ದಾರೆ.


ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ|ಎಚ್.ಆರ್ ತಿಮ್ಮಯ್ಯ ಅವರು ಮುನ್ನೆಚ್ಚರಿಕೆ ಕ್ರಮಗಳ ಮಹತ್ವವನ್ನು ವಿವರಿಸಿದರು. ದಕ್ಷಿಣ ಕನ್ನಡ ಜಿಲ್ಲೆ ಕೇರಳದ ಗಡಿಭಾಗದಲ್ಲಿರುವ ಕಾರಣ ಎಚ್ಚರಿಕೆಯಿಂದ ಇರುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು. ಕೇರಳದಲ್ಲಿ 27 ಪ್ರಕರಣಗಳು ವರದಿಯಾಗಿವೆ, ಈ ಪೈಕಿ 25 ಜನ ಹೋಂ ಐಸೋಲೋಷನ್ ನಲ್ಲಿದ್ದು ಇಬ್ಬರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಕೇರಳಕ್ಕೆ ಹೊಂದಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಪ್ರದೇಶಗಳಲ್ಲಿ ಸದ್ಯಕ್ಕೆ ನಿರ್ಬಂಧ ಹೇರುವ ಅಗತ್ಯವಿಲ್ಲ. ಆದರೆ ಚೆಕ್ಪೋಸ್ಟ್ಗಳಲ್ಲಿ ಕೋವಿಡ್ ಜಾಗೃತಿ ಮೂಡಿಸುವ ಕೆಲಸವನ್ನು ವಿಶೇಷ ಆದ್ಯತೆಯಲ್ಲಿ ನಡೆಸಲಾಗುವುದು ಎಂದು ತಿಳಿಸಿದರು.
ತಲಪಾಡಿ, ಬಂಟ್ವಾಳದ ಸಾರಡ್ಕ, ಪುತ್ತೂರಿನ ಸ್ವರ್ಗ, ಸುಳ್ಯಪದವು, ಸುಳ್ಯದ ಜಾಲ್ಸೂರು ಚೆಕ್ಪೋಸ್ಟ್ ಗಳಲ್ಲಿ, ರೈಲು ನಿಲ್ದಾಣ ಹಾಗೂ ಬಸ್ ನಿಲ್ದಾಣಗಳಲ್ಲಿ ಕೋವಿಡ್ ಜಾಗೃತಿ ಬಗ್ಗೆ ಪ್ರಚಾರ ಮಾಡಲು ಕ್ರಮ ಕೈಗೊಂಡಿದ್ದೇವೆ. ಮುನ್ನೆಚ್ಚರಿಕೆ ಉದ್ದೇಶಕ್ಕೆ ಈಗಾಗಲೇ ತಾಲೂಕುವಾರು ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸಲಾಗಿದೆ.
ಆಕ್ಸಿಜನ್ ಬೆಡ್, ಐಸಿಯು ಲಭ್ಯತೆ, ಆಕ್ಸಿಜನ್ ಘಟಕಗಳನ್ನು ಸನ್ನದ್ಧವಾಗಿಡುವಂತೆ ಸೂಚನೆ ನೀಡಿದ್ದೇವೆ. ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ವೈರಾಲಜಿ ಪ್ರಯೋಗಾಲಯದಲ್ಲಿ ಕೋವಿಡ್ ಪರೀಕ್ಷೆಗೆ ಎಲ್ಲ ರೀತಿಯ ಸಿದ್ಧತೆ ನಡೆಸಲಾಗಿದೆ ಎಂದರು.
ಜಿಲ್ಲೆಯ ಆಸ್ಪತ್ರೆಗಳಲ್ಲಿ ಒಟ್ಟು 10,986 ಬೆಡ್ಗಳು, 1,376 ಆಕ್ಸಿಜನ್ ಬೆಡ್, 722 ಐಸಿಯು ಬೆಡ್ ಮತ್ತು 336 ವೆಂಟಿಲೇಟರ್ ಹೊಂದಿದೆ ಎಂದು ತಿಳಿಸಿದರು.
ಇನ್ಫ್ಲುಯೆನ್ಸ-ಲೈಕ್ ಇಲ್ನೆಸ್ (ILI) ಮತ್ತು ತೀವ್ರವಾದ ಉಸಿರಾಟದ ಸೋಂಕಿನ (SARI) ರೋಗಲಕ್ಷಣಗಳನ್ನು ಹೊಂದಿರುವ ವ್ಯಕ್ತಿಗಳಿಗೆ ಪರೀಕ್ಷೆಯನ್ನು ಮಾಡಲಾಗುವುದು. ಐಎಲ್ಐ ಲಕ್ಷಣಗಳಿದ್ದರೆ ಹತ್ತಿರದ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಿ, ಅಗತ್ಯ ಪರೀಕ್ಷೆ ಹಾಗೂ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು. ರೋಗಲಕ್ಷಣವಿದ್ದರೆ ಮಾಸ್ಕ್ ಧರಿಸಬೇಕು, 60 ವರ್ಷ ಮೇಲ್ಪಟ್ಟವರು ಹಾಗೂ ಇತರ ರೋಗಗಳಿಂದ ಬಳಲುತ್ತಿರುವವರು, ಗರ್ಭಿಣಿಯರು ಮಾಸ್ಕ್ ಬಳಸಬೇಕು ಎಂದರು.
ಕೇರಳ ಭಾಗದಿಂದ ಆಗಮಿಸುವ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಕೋವಿಡ್ ಲಕ್ಷಣ, ಐಎಲ್ಐ, ಸಾರಿ ಪ್ರಕರಣ ಕಂಡುಬಂದರೆ ಅವರನ್ನು ಐಸೊಲೇಶನ್ಗೆ ಒಳಪಡಿಸಿ, ಕೊವಿಡ್ ತಪಾಸಣೆ ನಡೆಸಬೇಕು ಎಂದು ಎಲ್ಲ ವಿದ್ಯಾಸಂಸ್ಥೆಗಳಿಗೆ ಆರೋಗ್ಯ ಇಲಾಖೆಯಿಂದ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ಸದಾಶಿವ ಶಾನಭಾಗ್, ಆರ್ಸಿಎಚ್ ಅಧಿಕಾರಿ ಡಾ| ರಾಜೇಶ್, ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಉಳೆಪಾಡಿ ಪತ್ರಿಕಾಗೋಷ್ಠಿಯಲ್ಲಿದ್ದರು.




