ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ‘ಟಾಕ್ಸಿಕ್’ (Toxic) ಚಿತ್ರದ ಟೀಸರ್ ರಿಲೀಸ್ ಆಗಿ ಸದ್ದು ಮಾಡುತ್ತಿದೆ. ಈ ನಡುವೆಯೇ ವಕೀಲರೊಬ್ಬರು ಚಿತ್ರತಂಡದ ವಿರುದ್ಧ ದೂರು ನೀಡಿದ್ದಾರೆ.

ಬಹುನಿರೀಕ್ಷಿತ ‘ಟಾಕ್ಸಿಕ್’ ಟೀಸರ್ ಧೂಳೆಬ್ಬಿಸಿದೆ. ಎಲ್ಲೆಡೆ ‘ಟಾಕ್ಸಿಕ್’ ಟಾಕ್ ಜೋರಾಗಿದೆ. ಯಶ್ ಹಿಂದೆಂದೂ ಕಾಣಿಸಿಕೊಳ್ಳದ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಬೋಲ್ಡ್ ದೃಶ್ಯಗಳಲ್ಲೂ ಕಾಣಿಸಿಕೊಂಡಿದ್ದಾರೆ. ಆದರೆ ಇದೇ ವಿಚಾರವನ್ನಿಟ್ಟುಕೊಂಡು ವಕೀಲರೊಬ್ಬರು ಕೇಂದ್ರ ಸೆನ್ಸಾರ್ ಮಂಡಳಿಗೆ ದೂರು ಸಲ್ಲಿಸಿದ್ದಾರೆ.
ವಕೀಲ ಲೋಹಿತ್ ಕುಮಾರ್ ಎನ್ನುವವರು ‘ಟಾಕ್ಸಿಕ್’ ಟೀಸರ್‌ನಲ್ಲಿ ಹಸಿಬಿಸಿ ದೃಶ್ಯಕ್ಕೆ ಆಕ್ಷೇಪ ವ್ಯಕ್ತಪಡಿಸಿ ಕೇಂದ್ರ ಸೆನ್ಸಾರ್ ಮಂಡಳಿಗೆ ದೂರು ಸಲ್ಲಿಸಿದ್ದಾರೆ.
ವಕೀಲ ಹೇಳಿದ್ದೇನು?:
ಟೀಸರ್‌ನಲ್ಲಿ ಕಂಡುಬಂದ ದೃಶ್ಯಗಳನ್ನು ಗಮನಿಸಿದರೆ ಈ ಚಿತ್ರವು ಕುಟುಂಬ ಸದಸ್ಯರೊಂದಿಗೆ ನೋಡಲು ಸೂಕ್ತವಲ್ಲ. ಚಿತ್ರಮಂದಿರಗಳಲ್ಲಿ’ಎ’ ಸರ್ಟಿಫಿಕೇಟ್ ಇದ್ದರೆ ಮಕ್ಕಳನ್ನು ಪ್ರವೇಶಿಸದಂತೆ ತಡೆಯಲಾಗುತ್ತದೆ. ಆದರೆ ಯೂಟ್ಯೂಬ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಟೀಸರ್‌ಗಳಿಗೆ ಯಾವುದೇ ಮಾರ್ಗಸೂಚಿಗಳಿಲ್ಲದಿರುವುದು ಸಮಸ್ಯೆಯಾಗಿದೆ ಎಂದು ಮಾಧ್ಯಮವೊಂದಕ್ಕೆ ವಕೀಲ ಲೋಹಿತ್ ತಿಳಿಸಿದ್ದಾರೆ.




