ವೀಕ್ಷಕವಾಣಿ: ಕಟಪಾಡಿ ಮಸ್ಕತ್ ನ ಬಿಲ್ಲವ ಸಂಘಟನೆ ‘ಓಮನ್ ಬಿಲ್ಲವಾಸ್’ ವತಿಯಿಂದ ಒಂದು ದಿನದ ಹೊನಲು ಬೆಳಕಿನ ಕ್ರೀಡಾಕೂಟ ಸಂಘದ ಅಧ್ಯಕ್ಷ ಸುಜಿತ್ ಅಂಚನ್ ನೇತೃತ್ವದಲ್ಲಿ ಮಸ್ಕತ್ ನ ಅಲ್ ಹೈಲ್ ಕ್ರಿಕೆಟ್ ಮೈದಾನದಲ್ಲಿ ಜರಗಿತು.
ಸಂಘಟನೆಯ ಸ್ಥಾಪಕ ಅಧ್ಯಕ್ಷ ದಿ.ಶಿ.ಪಿ.ಬಿ.ಅಲ್ಕೆ ಸ್ಮರಣಾರ್ಥ ಪುರುಷರಿಗೆ ಮತ್ತು ಮಹಿಳೆಯರಿಗೆ ಕ್ರಿಕೆಟ್ ಮತ್ತು ಥ್ರೋಬಾಲ್ ಹಾಗೆಯೇ ಮಕ್ಕಳಿಗೆ, ಹಿರಿಯರಿಗೆ ನಾನಾ ಕ್ರೀಡೆಗಳನ್ನು ಆಯೋಜಿಸಲಾಗಿದೆ.
ಪುರುಷರ 8 ತಂಡಗಳು ಹಾಗೂ ಮಹಿಳೆಯರ 4 ತಂಡಗಳು ಪ್ರಪ್ರಥಮವಾಗಿ ಆಯೋಜಿಸಲಾದ ದಿ.ಶಿ.ಪಿ.ಬಿ.ಅಲ್ಕೆ ಟ್ರೋಫಿ 2024ಕ್ಕಾಗಿ ತಲಾ 5 ಓವರ್ ಗಳ ಲೀಗ್ ಮಾದರಿಯ ಪಂದ್ಯಾಟದಲ್ಲಿ ಭಾಗವಹಿಸಿದ್ದು, ಪುರುಷರ ವಿಭಾಗದ ಫೈನಲ್ ಪಂದ್ಯದಲ್ಲಿ ಸುಕುಮಾರ್ ಅಂಚನ್ ಪಾಂಗಾಳ ಹಾಗೂ ತಂಡ ‘ಗೆಜ್ಜೆಗಿರಿ ಇಲೆವೆನ್’ ತಂಡವು ಸಂದೀಪ್ ಕರ್ಕೇರ ಮತ್ತು ತಂಡ ‘ಬೆದ್ರ ಇಲೆವೆನ್’ ವಿರುದ್ಧ 6 ವಿಕೆಟ್ ಗಳ ಭರ್ಜರಿ ಜಯಭೇರಿ ಪಡೆದು ಟ್ರೋಫಿ ಯನ್ನು ಮುಡಿಗೇರಿಸಿಕೊಂಡಿತು.
ಮಹಿಳೆಯರ ಕ್ರಿಕೆಟ್ ವಿಭಾಗದ ಫೈನಲ್ ಹಣಾಹಣೆಯಲ್ಲಿ ‘ಟೀಮ್ ಶಕ್ತಿ’ ತಂಡ ‘ಟೀಮ್ ಭೈರವಿ’ ವಿರುದ್ಧ 6 ವಿಕೆಟ್ ಗಳ ರೋಚಕ ಗೆಲುವಿನೊಂದಿಗೆ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಥ್ರೋಬಾಲ್ ಪಂದ್ಯದ ಫೈನಲ್ ಮುಖಾಮುಖಿಯಲ್ಲಿ ‘ಟೀಮ್ ಶಕ್ತಿ’ ತಂಡವು ‘ಬಿರ್ವಾ ಬೊಳ್ಳಿಲು’ ವಿರುದ್ದ ಜಯ ಸಾಧಿಸಿತು. ಉತ್ತಮ ಆಟಗಾರಾರಿಗೆ, ವಿಜೇತ ತಂಡಗಳಿಗೆ ಹಾಗೂ ಕ್ರೀಡಾಪಟುಗಳಿಗೆ ಪ್ರಶಸ್ತಿ ವಿತರಿಸಲಾಯಿತು.
ಕ್ರೀಡಾಮಹೋತ್ಸವದಲ್ಲಿ ಓಮನ್ ಬಿಲ್ಲವಾಸ್ ಅಧ್ಯಕ್ಷ ಸುಜಿತ್ ಅಂಚನ್, ಸ್ಥಾಪಕ ಸದಸ್ಯರು ಹಾಗೂ ಮಾಜಿ ಅಧ್ಯಕ್ಷರಾದ ಅಶೋಕ್ ಸುವರ್ಣ, ಎಸ್. ಕೆ. ಪೂಜಾರಿ, ಡಾ. ಅಂಚನ್ ಸಿ. ಕೆ., ಓಮನ್ ತುಳುವೆರ್ ಅಧ್ಯಕ್ಷ ರಾಮಾನಂದ ಶೆಟ್ಟಿ, ಮಸ್ಕತ್ ಮೊಗವೀರ್ಸ್ ಪ್ರತಿನಿಧಿ ಶ್ರೀಶ ಕಾಂಚನ್, ಕರಾವಳಿ ಫ್ರೆಂಡ್ಸ್ ನ ಹಿತೇಶ್ ಉಪಸ್ಥಿತರಿದ್ದರು. ನವೀನ್ ಪೂಜಾರಿ, ಗಣೇಶ್ ಪೂಜಾರಿ ಮತ್ತು ನಿತೇಶ್ ನೇತೃತ್ವದಅಡುಗೆ ತಂಡವು ದಿನದ ಮೂರು ಹೊತ್ತಿನ ಊಟೋಪಚಾರದ ನೇತೃತ್ವ ವಹಿಸಿತ್ತು.