ಪೈವಳಿಕೆ: ಚಿಪ್ಪಾರು ಓಂ ಶ್ರೀ ಜ್ಯೇಷ್ಠ ರಾಜ ಗಣಪತಿ ಭಜನಾ ಸಂಘದ ಆಶ್ರಯದಲ್ಲಿ ಚಿಪ್ಪಾರಿನ ಓಂ ಶ್ರೀ ಜ್ಯೇಷ್ಠ ರಾಜ ಗಣಪತಿ ಭಜನಾ ಮಂದಿರದಿಂದ-ಮಧೂರು ಶ್ರೀ ಮದನಂತೇಶ್ವರ-ಸಿದ್ಧಿವಿನಾಯಕ ಸನ್ನಿಧಿಗೆ 2ನೇ ವರ್ಷ ದ ಪಾದಯಾತ್ರೆ ನ.26ರಂದು ಬೆಳಿಗ್ಗೆ ಮಕ್ಕಳು, ಮಾತೆಯರು ಸೇರಿದಂತೆ ಬಹುಜನ ಭಕ್ತರ ಪಾಲ್ಗೊಳ್ಳುವಿಕೆಯೊಂದಿಗೆ ಸಂಭ್ರಮದಿಂದ ನಡೆಸಲಾಯಿತು.
ಪ್ರಾತಃ ಕಾಲದಲ್ಲಿ ಮಂದಿರದಲ್ಲಿ ದೇವರ ಮಹಾಪೂಜೆ -ಪ್ರಾರ್ಥನೆ ನಡೆಸಿ ಆರಂಭಿಸಿ ಸುಮಾರು 30 ಕಿ.ಮೀ ದೂರದ ಈ ಪಾದಯಾತ್ರೆಯ ನಡುವೆ, ಪೆರ್ಮುದೆ ಶ್ರೀ ದುರ್ಗಾ ಪರಮೇಶ್ವರಿ ಭಜನಾ ಮಂದಿರದಲ್ಲಿ ಬೆಳಗಿನ ಉಪಾಹಾರ, ಸೀತಾಂಗೋಳಿ ಶ್ರೀ ಶ್ರೀದೇವಿ ಭಜನಾ ಮಂದಿರದಲ್ಲಿ ಲಘು ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ 12.30 ಗಂಟೆಗೆ ಮಧೂರು ಶ್ರೀ ಕ್ಷೇತ್ರ ತಲುಪಿದ ಪಾದಯಾತ್ರೆಗೆ ವಿಶೇಷ ಸ್ವಾಗತ, ಸತ್ಕಾರ ಕ್ಷೇತ್ರದ ವತಿಯಿಂದ ನೀಡಲಾಯಿತು.
ಶ್ರೀ ದೇವರ ದರ್ಶನ ನಡೆಸಿ ಪ್ರಸಾದ ಭೋಜನ ಸ್ವೀಕರಿಸಿ ನಂತರ ಭಕ್ತಿಯ ಸಂತೃಪ್ತ ಭಾವದೊಂದಿಗೆ ಚಿಪ್ಪಾರಿಗೆ ಹಿಂದಿರುಗಲಾಯಿತು. ಈ ಪಾದಯಾತ್ರೆಯಲ್ಲಿ ಭಾಗವಹಿಸಿದ ಎಲ್ಲಾ ಭಕ್ತ ಜನರಿಗೂ, ಮಾರ್ಗ ಮಧ್ಯೆ ಉಪಾಹಾರ, ಪಾನೀಯ ನೀಡಿ ಸತ್ಕರಿಸಿದ ಭಜನಾ ಮಂದಿರದವರಿಗೂ, ಸಾರ್ವಜನಿಕಗೂ ಓಂ ಶ್ರೀ ಜ್ಯೇಷ್ಠ ರಾಜ ಗಣಪತಿ ಭಜನಾ ಸಂಘದ ಪರವಾಗಿ ವಿಶೇಷ ಕೃತಜ್ಞತೆಗಳನ್ನು ಸಲ್ಲಿಸಲಾಯಿತು.