ಉಡುಪಿ: ಪರಶುರಾಮ ಥೀಂ ಪಾರ್ಕ್ ನಲ್ಲಿರುವ ಪರಶುರಾಮನ ಪ್ರತಿಮೆಯ ರಿಯಾಲಿಟಿ ಚೆಕ್ ಮಾಡಲು ಹೊರಟ ಕಾಂಗ್ರೆಸ್ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಬೈಲೂರು ಉಮಿಕಲ್ ಕುಂಜ ಬೆಟ್ಟದ ಮೇಲೆ ನಿರ್ಮಾಣವಾಗಿದ್ದ ಪರಶುರಾಮನ ಪ್ರತಿಮೆ ಫೈಬರ್ ಎನ್ನುವ ವಿಷಯ ಕಳೆದ ಎರಡು ತಿಂಗಳಿನಿಂದ ಸಾಮಾಜಿಕ ಜಾಲತಾಣ ಮತ್ತು ಬಹಿರಂಗವಾಗಿ ಚರ್ಚೆಯನ್ನು ಹುಟ್ಟು ಹಾಕಿದೆ.
ಕಾರ್ಕಳ ಕಾಂಗ್ರೆಸ್ ಈ ಬಗ್ಗೆ ನಿರಂತರ ಪ್ರತಿಭಟನೆ ನಡೆಸುತ್ತಿದ್ದು, ಮೂರ್ತಿಯ ಸತ್ಯತೆಯು ಬಯಲಿಗೆ ಇಳಿದಿತ್ತು. ಇದರ ಕುರಿತು ಸ್ಥಳೀಯ ಬಿಜೆಪಿ ಕಾರ್ಯಕರ್ತ ಸುನಿಲ್ ಎಂಬುವವರು ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಪರಶುರಾಮ ವಿಗ್ರಹದ ಮುಂದುವರಿದ ಕಾಮಗಾರಿಗಳು ನಡೆಯುತ್ತಿರುವ ಕಾರಣ ಮಾನ್ಯ ಜಿಲ್ಲಾಧಿಕಾರಿಯವರು ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹಾಕಿದ್ದರು. ಆದರೂ ಕೂಡ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಗುಂಪುಗುಂಪಾಗಿ ಉಮಿಕಲ್ ಬೆಟ್ಟದ ಮೇಲೆ ಹೋಗಿದ್ದಾರೆ. ಸರ್ಕಾರಿ ಸೊತ್ತು ಆಗಿರುವ ಪರಶುರಾಮ ವಿಗ್ರಹಕ್ಕೆ ಹೊದಿಸಿದ ರಕ್ಷಣಾ ಕವಚವನ್ನು ಹರಿದು ಹಾಕಿ, ಕಂಚಿನ ಮೂರ್ತಿಯ ಮೇಲಿದ್ದ ಫಿನಿಷಿಂಗ್ ಲೇಪನವನ್ನು ಹರಿದಿದ್ದಾರೆ. ಮೂರ್ತಿಯ ಮೂಲ ಸ್ವರೂಪವನ್ನು ವಿರೂಪಗೊಳಿಸಿ ಹಾನಿ ಮಾಡಿ ಸರ್ಕಾರಕ್ಕೆ ನಷ್ಟವುಂಟುಮಾಡಿದ್ದಾರೆ. ಬಳಿಕ ಮೂರ್ತಿ ಫೈಬರ್ ಎಂಬಂತೆ ಸುಳ್ಳು ಸುದ್ದಿಯನ್ನು ಹಬ್ಬಿಸಿರುವುದಾಗಿ ಸುನೀಲ್ ದೂರಿದ್ದಾರೆ.