ಇತ್ತೀಚಿನ ದಿನಗಳಲ್ಲಿ ಎಲ್ಲಾ ವ್ಯವಹಾರವೂ ಆನ್‌ಲೈನ್‌ನಲ್ಲೇ ನಡೆಯುತ್ತಿವೆ. ನಗರ ವ್ಯಾಪ್ತಿಯಲ್ಲಿ ಬಾಡಿಗೆ ವಾಹನಗಳನ್ನು ಆನ್‌ಲೈನ್ ಮೂಲಕವೇ ಬುಕ್ಕಿಂಗ್ ಮಾಡುವ ವ್ಯವಸ್ಥೆ ಕೂಡ ಇದೆ. ವಿರಾಜಪೇಟೆಯಲ್ಲಿ ಮೊದಲ ಬಾರಿಗೆ ಆಟೋರಿಕ್ಷಾ ಸೇರಿದಂತೆ ಬಾಡಿಗೆ ವಾಹನಗಳನ್ನು ಬಾಡಿಗೆ ಪಡೆಯಲು ‘ಪರಿಹಾರ ’ ಎಂಬ ಆ್ಯಪ್‌ನ್ನು ಜಾರಿಗೆ ತರಲಾಗುತ್ತಿದೆ.
ಬರುವ ಆಗಸ್ಟ್ ಮೊದಲ ವಾರದಲ್ಲೇ ವಿರಾಜಪೇಟೆಯಲ್ಲಿ ಪ್ರಾಯೋಗಿಕವಾಗಿ ಆ್ಯಪ್‌ಗೆ ಚಾಲನೆ ಸಿಗಲಿದೆ. ಇದು ಯಶಸ್ವಿಯಾದರೆ ಇನ್ನೆರಡು ತಿಂಗಳೊಳಗೆ ಕೊಡಗು ಜಿಲ್ಲೆಯಾದ್ಯಂತ ಈ ಸೇವೆ ವಿಸ್ತಾರಗೊಳ್ಳಲಿದೆ. ಇದರೊಂದಿಗೆ ಆನ್‌ಲೈನ್ ಮೂಲಕವೇ ಪ್ರತಿಯೊಂದು ವ್ಯವಹಾರವೂ ಲಭ್ಯವಾಗುವಂತೆ ಮಾಡುವ ಸಿದ್ಧತೆಯೂ ನಡೆದಿದೆ.
ಎಂಜಿನಿಯರಿಂಗ್ ಪದವೀಧರರಾಗಿರುವ ವಿರಾಜಪೇಟೆಯ ಯುವ ಉದ್ಯಮಿ ಪಿ. ವಿಷ್ಣು ‘ಪರಿಹಾರ’ ಆ್ಯಪ್ ನ ರೂವಾರಿಯಾಗಿದ್ದಾರೆ. ವಿರಾಜಪೇಟೆಯಲ್ಲಿ ರವಿರಾಜ್ ಗ್ಯಾಸ್ ಏಜೆನ್ಸಿ ನಡೆಸುತ್ತಿರುವ ಉದ್ಯಮಿ ಪರಮಶಿವ ರವರ ಪುತ್ರ ವಿಷ್ಣು ಈ ಹೊಸ ವ್ಯವಸ್ಥೆಯೊಂದನ್ನು ಜನರಿಗೆ ಪರಿಚಯಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಇವರ ಈ ಪ್ರಯತ್ನಕ್ಕೆ ನೂರಾರು ಸದಸ್ಯರನ್ನು ಹೊಂದಿರುವ ವಿರಾಜಪೇಟೆ ಆಟೋ ಚಾಲಕರ ಸಂಘದವರು ಸಾಥ್ ನೀಡಿದ್ದಾರೆ.
ಏನಿದು ಪರಿಹಾರ ಆ್ಯಪ್?:
ಪ್ರಥಮ ಹಂತದಲ್ಲಿ ಆನ್‌ಲೈನ್ ಮೂಲಕ ವಿರಾಜಪೇಟೆಯಲ್ಲಿ ಆಟೋ ರಿಕ್ಷಾ ಬುಕ್ಕಿಂಗ್ ಮಾಡುವ ಅವಕಾಶ ಕಲ್ಪಿಸಲಾಗುತ್ತದೆ. ತಾವು ಇರುವ ಸ್ಥಳಕ್ಕೆ ಆಟೋಗಳು ಬರುವ ಸವಲತ್ತು ಲಭ್ಯವಾಗಲಿದೆ. ತಾವು ಇರುವ ಸ್ಥಳದಿಂದ ತೆರಳಬೇಕಾದ ಸ್ಥಳಕ್ಕೆ ಎಷ್ಟುಖರ್ಚಾಗುತ್ತದೆ ಎಂಬ ಮಾಹಿತಿಯೂ ಆ್ಯಪ್‌ನಲ್ಲಿ ಲಭ್ಯವಾಗುತ್ತದೆ. ಆನ್‌ಲೈನ್ ಮೂಲಕ ಬುಕ್ಕಿಂಗ್ ಮಾಡಿದ್ದಾಗ, ಸಮೀಪದಲ್ಲಿರುವ ಆಟೋ ತಾವಿರುವಲ್ಲಿಗೇ ಬರಲಿದೆ. ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಈ ಆ್ಯಪ್ ಕಾರ್ಯನಿರ್ವಹಿಸಲಿದೆ ಎಂದು ಈ ಆ್ಯಪ್‌ನ ರೂವಾರಿಯಾದಂತಹ ವಿಷ್ಣು ರವರು ತಿಳಿಸಿದ್ದಾರೆ.