
ಕರ್ನಾಟಕದಲ್ಲಿ ಮಳೆಗಾಲದ ಬೆನ್ನಲ್ಲೇ ಬೆಂಗಳೂರು ಸೇರಿದಂತೆ ಎಲ್ಲಾ ಭಾಗದಲ್ಲಿ ರಸ್ತೆಗುಂಡಿಗಳು ಬಾಯ್ತೆರೆಯುತ್ತಿವೆ. ಬೆಂಗಳೂರಿನಲ್ಲಂತೂ ವಿಪರೀತ ರಸ್ತೆಗುಂಡಿಗಳು ನಿರ್ಮಾಣವಾಗಿದೆ. ಬೆಂಗಳೂರು ಸೇರಿದಂತೆ ವಿವಿಧ ಭಾಗದಲ್ಲಿ ನಿರ್ಮಾಣವಾಗಿರುವ ರಸ್ತೆಗುಂಡಿಗಳಿಂದ ಜನ ಹೈರಾಣಾಗಿದ್ದಾರೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ರಸ್ತೆಯೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ರಸ್ತೆಯನ್ನು ನೋಡಿರುವ ಜನ ಗುಂಡಿಯಲ್ಲಿ ರಸ್ತೆಯೋ, ರಸ್ತೆಯಲ್ಲಿ ಗುಂಡಿಯೋ ಅಂತ ಹೇಳುವುದಕ್ಕೆ ಬದಲಾಗಿ.. ಇದೇನಾ ಚಿನ್ನದ ರೋಡ್ ಅಂತ ಕೇಳುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ರಸ್ತೆಯ ಬಗ್ಗೆ ವಿಪರೀತವಾಗಿ ಯಾಕೆ ಚರ್ಚೆಯಾಗುತ್ತಿದೆ.

ಪರಮಾನಂದ ಹೆಗ್ಡೆ ಎನ್ನುವವರು, ಶಿರಸಿ ತಾಲೂಕಿಗೆ ಮತ್ತೊಂದು ಪ್ರೇಕ್ಷಣೀಯ ಸ್ಥಳದ ಕೊಡುಗೆ ಒಂದು ಸಹಸ್ರಲಿಂಗವಾದರೆ ಮತ್ತೊಂದು ಸಹಸ್ರ ಹೊಂಡ. ಒಂದು ಪ್ರಕೃತಿ ನಿರ್ಮಿತವಾದರೆ ಇನ್ನೊಂದು ಮಾನವ ನಿರ್ಮಿತ ಎಂದಿದ್ದಾರೆ. ಧರ್ಮಾನಂದ ಅವರು, ರಸ್ತೆ ಗುಂಡಿಗಳು ತುಂಬ ಅಚ್ಚುಕಟ್ಟಾಗಿ, ಅಳತೆಮಾಡಿ ಬಿದ್ದಂತಿವೆ. ಈ ರಸ್ತೆಯಲ್ಲಿ ವಾಹನಗಳ ಸವಾರಿ ಒಂದು ಸರ್ಕಸ್ಸೇ ಆದೀತು. ಇದರ ರಿಪೇರಿಗೆ ಬಹುಶಃ ಹಣದ ಕೊರತೆ ಇರಬಹುದು. ಹಣ ಹರಿದು, ಸುರಿದುಹೋಗುತ್ತಿದೆ ಎಲ್ಲರಿಗೂ ಗೊತ್ತಿರುವ ಸತ್ಯ ಎಂದಿದ್ದಾರೆ.
ಶರೀಫ್ ಕಾಡುಮಠ ಎನ್ನುವವರು, 1996-99 & 2004-2024 ಒಟ್ಟು 23 ವರ್ಷಗಳ ವರೆಗೆ ಇಲ್ಲಿನ ಜನ ಆಯ್ಕೆ ಮಾಡಿದ್ದು ಅದೇ ಸಂಸದರನ್ನು. ಅವಧಿ ಮುಗಿದಂತೆ ಮುಂದಿನ ಚುನಾವಣೆಯ ಸಮಯ ಬರುವಾಗ ದ್ವೇಷ ಭಾಷಣವನ್ನೇ ಪ್ರಚಾರದ ಉಸಿರಾಗಿಸಿ ಅವರು ಗೆಲ್ಲುತ್ತ ಬಂದರು. ಇವರು ಗೆಲ್ಲಿಸುತ್ತ ಬಂದರು. ಸರ್ಕಾರಿ ಆಸ್ಪತ್ರೆ ಇಲ್ಲದೆ ತುರ್ತು ಚಿಕಿತ್ಸೆಗಾಗಿ ಉತ್ತರ ಕನ್ನಡದಿಂದ ಹುಬ್ಬಳ್ಳಿಯ ಕಿಮ್ಸ್ಗೆ ರೋಗಿಗಳನ್ನು ಗಂಟೆಗಟ್ಟಲೆ ಆಂಬ್ಯುಲೆನ್ಸ್ನಲ್ಲಿ ಅಥವಾ ಕಾರಿನಲ್ಲಿ ಕರೆದುಕೊಂಡು ಹೋಗಿ(ಅದೂ ಇಂಥದ್ದೇ ರಸ್ತೆಯಲ್ಲಿ), ಅಲ್ಲಿಗೆ ತಲುಪುವಷ್ಟರಲ್ಲಿ ಅವರ ಜೀವ ಹೋಗಿ, ಶವವಾಗಿ ಮರಳಿ ತರುವ ಪರಿಸ್ಥಿತಿ ಅಲ್ಲಿಯದ್ದು. ಹಾಗಿದ್ದರೂ ದ್ವೇಷ ಭಾಷಣವನ್ನು ಪ್ರಶ್ನಿಸಲಿಲ್ಲ, ಅಭಿವೃದ್ಧಿಯ ಬಗ್ಗೆ ಪ್ರಶ್ನೆ ಮಾಡಲಿಲ್ಲ. ಅವರು ಮಾಡಿದ್ದೆಲ್ಲವೂ ಇವೇ ಎಂದು ಇದ್ದುಬಿಟ್ಟರು. ಅಲ್ಲಿನ ಅಭಿವೃದ್ಧಿಯ ಪುಟ್ಟ ಝಲಕ್ ಇದು. ಸೂಲಿಬೆಲೆ ಅವರ ಭಾಷೆಯಲ್ಲಿ ಇದು ಶಿರಸಿಯ ‘ಚಿನ್ನದ ರಸ್ತೆ’ ಬಂಧುಗಳೇ ಎಂದು ಆಕ್ರೋಶ ಭರಿತ ವ್ಯಂಗ್ಯವನ್ನು ಹೊರ ಹಾಕಿದ್ದಾರೆ.




