ಕಲ್ಲಾಕುರಿಚಿ : ವಿಷಕಾರಿ ಕಲಬೆರಕೆ ಮದ್ಯ ಕುಡಿದು ಕನಿಷ್ಠ 25 ಮಂದಿ ಸಾವನ್ನಪ್ಪಿ 60ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡ ಘಟನೆ ತಮಿಳುನಾಡಿನ ಕಲ್ಲಾಕುರಿಚಿ ಜಿಲ್ಲೆಯಲ್ಲಿ ನಡೆದಿದೆ. ಅಸ್ವಸ್ಥಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಕಲ್ಲಾಕುರಿಚಿ ಜಿಲ್ಲಾಧಿಕಾರಿ ಎಂ.ಎಸ್.ಪ್ರಶಾಂತ್ ಅವರು ಜಿಲ್ಲೆಯ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಭೇಟಿ ಮಾಡಿದರು. ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸಾವಿನ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು, ಇದನ್ನು ತಡೆಯುವಲ್ಲಿ ವಿಫಲರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
“ಕಲ್ಲಾಕುರಿಚಿಯಲ್ಲಿ ಕಲಬೆರಕೆ ಮದ್ಯ ಸೇವಿಸಿ ಸಾವನ್ನಪ್ಪಿರುವ ಸುದ್ದಿ ಕೇಳಿ ಆಘಾತ ಮತ್ತು ದುಃಖವಾಗಿದೆ. ಈ ಪ್ರಕರಣದಲ್ಲಿ ಅಪರಾಧದಲ್ಲಿ ಭಾಗಿಯಾದವರನ್ನು ಬಂಧಿಸಲಾಗಿದೆ. ಇದನ್ನು ತಡೆಯಲು ವಿಫಲರಾದ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ” ಸ್ಟಾಲಿನ್ ಸಾಮಾಜಿಕ ಜಾಲತಾಣ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಇಂತಹ ಅಪರಾಧಗಳಲ್ಲಿ ಭಾಗಿಯಾಗಿರುವವರ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದರೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು. ಸಮಾಜವನ್ನು ಹಾಳುಗೆಡವುವ ಇಂತಹ ಅಪರಾಧಗಳನ್ನು ಹತ್ತಿಕ್ಕಲಾಗುವುದು ಎಂದರು.
ರಾಜ್ಯಪಾಲ ಆರ್.ಎನ್ ರವಿ ಅವರು ಘಟನೆಯಲ್ಲಿ ಮೃತಪಟ್ಟವರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, ಅಸ್ವಸ್ಥರು ಶೀಘ್ರ ಗುಣಮುಖರಾಗಲು ಹಾರೈಸಿದ್ದಾರೆ.