ಉಡುಪಿ: ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂಬ ಹಂಬಲದಿಂದ ಜನರು ನನಗೆ ಮತ ಹಾಕಿದ್ದಾರೆ. ನನ್ನ ಗೆಲುವಿಗೆ ಸಹಕರಿಸಿದ ಎಲ್ಲಾ ಮತದಾರರಿಗೆ ಕೃತಜ್ಞತೆಗಳು. ನನ್ನ ಗೆಲುವಿಗೆ ದುಡಿದ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರಿಗೆ ಧನ್ಯವಾದಗಳು ಎಂದು ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಉಡುಪಿ ಸೈಂಟ್ ಸಿಸಿಲಿ ಆಂಗ್ಲ ಮಾಧ್ಯಮ ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮಕ್ಕೆ ಮೊದಲ ಪ್ರತಿಕ್ರಿಯಿ ನೀಡಿದರು.
ಬಿಜೆಪಿ ಅತಿ ಹೆಚ್ಚು ಸ್ಥಾನ ಗೆಲ್ಲುವ ಭರವಸೆ ಇತ್ತು. ಎನ್ ಡಿ ಎ 295ರ ಆಸು ಪಾಸು ಗೆಲುವು ಪಡೆದಿದೆ. ನಿಶ್ಚಯವಾಗಿ ಏನ್ ಡಿ ಎ ಅಧಿಕಾರಕ್ಕೆ ಬರುತ್ತೆ. ಏನ್ ಡಿ ಎ ಸ್ಪಷ್ಟ ಬಹುಮತ ಪಡೆಯುವ ನಿರೀಕ್ಷೆ ನಮಗೆ ಇತ್ತು. ಆದರೆ ನಿರೀಕ್ಷೆ ಮಟ್ಟಕ್ಕೆ ಮುಟ್ಟಿಲ್ಲ ಎಂದರು.
ಉತ್ತರ ಪ್ರದೇಶ ಪಶ್ಚಿಮ ಬಂಗಾಳ ರಾಜಸ್ಥಾನದಲ್ಲಿ ನಾವು ಊಹೆ ಮಾಡಿದ ಪ್ರಮಾಣದಲ್ಲಿ ಗೆಲುವು ಪಡೆದಿಲ್ಲ. ಕೊನೆಯ ಹಂತದಲ್ಲಿ ಇಂಡಿಯಾ ಒಕ್ಕೂಟದವರು ಒಂದು ಲಕ್ಷ ರೂಪಾಯಿ ಕೊಡುವುದಾಗಿ ಹೇಳಿದರು. ಮನೆ ಮನೆಗೆ ಮಾಡಿದ ಪ್ರಚಾರ ಸಾಮಾನ್ಯ ಜನರಲ್ಲಿ ಬದಲಾವಣೆಗೆ ಕಾರಣವಾಗಿರಬಹುದು. ನಿರೀಕ್ಷೆಯ ಮಟ್ಟ ಮುಟ್ಟದಿದ್ದರೂ ಎನ್ ಡಿ ಎ ಮತ್ತೊಮ್ಮೆ ಗೆದ್ದಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ 20ಕ್ಕೂ ಅಧಿಕ ಸ್ಥಾನ ಗೆಲ್ಲುವ ಭರವಸೆ ಇತ್ತು
ಸ್ವಲ್ಪ ಕಡಿಮೆ ಇದ್ದೇವೆ. ತುಂಬಾ ಕಡಿಮೆ ಏನೂ ಬಂದಿಲ್ಲ. ಮತ್ತೊಮ್ಮೆ ಏನ್ಡಿಎ ಒಕ್ಕೂಟ ವಿಶ್ವಾಸ ಪಡೆದಿದೆ. ಭಾರತಕ್ಕೆ ನರೇಂದ್ರ ಮೋದಿ ತುಂಬಾ ಕೆಲಸ ಮಾಡಿದ್ದಾರೆ. ಬಡವರ ಕಲ್ಯಾಣ ಯೋಜನೆಗಳು ಕೈ ಹಿಡಿದಿವೆ. ತ್ರೀ ಸೆವೆಂಟಿ ರದ್ದು ಮಾಡಿದ್ದು, ಅಯೋಧ್ಯೆಯಲ್ಲಿ ರಾಮಮಂದಿರ ಮಾಡಿದ್ದು, ಈ ಎಲ್ಲಾ ಘಟನೆಗಳು ಕಣ್ಣಮುಂದೆ ಇದ್ದರೂ ಜನ ಒಂದು ಲಕ್ಷ ರೂಪಾಯಿ ನೀಡುವ ಇಂಡಿಯಾ ಒಕ್ಕೂಟ ಘೋಷಣೆಗೆ ಗಮನ ಸೆಳೆದಿದ್ದಾರೆ. ಇಂಡಿಯಾ ಒಕ್ಕೂಟದ ಈ ತಂತ್ರ ಕೆಲಸ ಮಾಡಿದ್ದು ಸತ್ಯ ಎಂದರು.