ಚಿತ್ರದುರ್ಗ, ಅಕ್ಟೋಬರ್ 12: ಜಿಲ್ಲೆಯಲ್ಲಿ ಕಳ್ಳರ ಹಾವಳಿ ಮಿತಿ ಮೀರಿದೆ. ಚಿತ್ರದುರ್ಗ (Chitradurga), ಚಳ್ಳಕೆರೆ, ಹಿರಿಯೂರು ತಾಲೂಕಿನಲ್ಲಿ ಚಡ್ಡಿ ಗ್ಯಾಂಗ್ (Chaddi Gang) ಪ್ರತ್ಯಕ್ಷವಾಗಿದೆ. ಚಡ್ಡಿ ಗ್ಯಾಂಗ್ ಕಳ್ಳತನಕ್ಕೆ ಯತ್ನಿಸಿದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆ ಆಗಿವೆ. ಆದರೆ ಪೊಲೀಸರು ಮಾತ್ರ ಆರೋಪಿಗಳ ಬಂಧಿಸದೇ ಇರುವುದು ಜನರಲ್ಲಿ ಭೀತಿ ಹೆಚ್ಚಿಸಿದೆ.
ಚಡ್ಡಿ ಗ್ಯಾಂಗ್ ಜಾಲ ಭೇದಿಸದ ಪೊಲೀಸ್: ಜನರು ಆಕ್ರೋಶ
ಜಿಲ್ಲೆಯ ಚಳ್ಳಕೆರೆ, ಹೊಳಲ್ಕೆರೆ ಮತ್ತು ಹಿರಿಯೂರಿನಲ್ಲಿ ಚಡ್ಡಿ ಗ್ಯಾಂಗ್ ಆ್ಯಕ್ಟೀವ್ ಆಗಿದ್ದು, ತನ್ನ ಕೈಚಳಕ ತೋರಿಸುತ್ತಿದೆ. ಮಾರಕಾಸ್ತ್ರ ಹಿಡಿದು ಕಳ್ಳತನಕ್ಕೆ ದರೋಡೆಕೋರರ ಯತ್ನಿಸಿದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆ ಆಗಿವೆ. ಈಗಾಗಲೇ ಚಡ್ಡಿ ಗ್ಯಾಂಗ್ ಕಳೆದ ಎರಡ್ಮೂರು ತಿಂಗಳಿಂದಲೂ ಆಗಾಗ ಪ್ರತ್ಯಕ್ಷ ಆಗಿದೆ. ಹೀಗಾಗಿ, ಜನರಲ್ಲಿ ಭೀತಿ ಉಂಟಾಗಿದೆ. ಹೀಗಿದ್ದರು ಪೊಲೀಸರು ಪಡೆ ಮಾತ್ರ ಚಡ್ಡಿ ಗ್ಯಾಂಗ್ ಜಾಲ ಭೇದಿಸುವ ಕೆಲಸ ಮಾಡದೇ ಇರುವುದು ಜನರ ಆಕ್ರೋಶಕ್ಕೆ ಕಾರಣ ಆಗಿದೆ.

ಇನ್ನು ಚಡ್ಡಿ ಗ್ಯಾಂಗ್ನಿಂದ ಸರಗಳ್ಳತನ ಪ್ರಕರಣಗಳು, ಮನೆಗಳ್ಳತನ, ದರೋಡೆ ಯತ್ನ ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿವೆ. ಆದರೆ ಮೂರು ತಿಂಗಳಲ್ಲಿ ಅನೇಕ ಸಲ ಚಡ್ಡಿ ಗ್ಯಾಂಗ್ ಪ್ರತ್ಯಕ್ಷ ಆಗಿದ್ದರೂ ಖಾಕಿ ಬಂಧಿಸದೇ ಇರುವುದು ಜನರಲ್ಲಿ ಭೀತಿ ಜೊತೆಗೆ ಅನುಮಾನ ಮೂಡಿಸಿದೆ.
ಈ ಬಗ್ಗೆ ಎಸ್ಪಿ ರಂಜಿತ್ ಅವರನ್ನು ಕೇಳಿದರೆ, ಈ ಬಗ್ಗೆ ಆಮೇಲೆ ಚರ್ಚಿಸೋಣ ಎಂದು ನುಣುಚಿಕೊಳ್ಳುತ್ತಾರೆ. ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದಲ್ಲಿ ಕಳ್ಳರ ಹಾವಳಿ ಹೇಳತೀರದಾಗಿದೆ. ಆದರೆ ಪೊಲೀಸರು ಮಾತ್ರ ದೂರು ದಾಖಲಿಸಿ ಸುಮ್ಮನಾಗುತ್ತಿದ್ದಾರೆ. ಚಡ್ಡಿ ಗ್ಯಾಂಗ್ ಬಂಧಿಸಿ ಜನರ ಭೀತಿ ದೂರು ಮಾಡಬೇಕಾದ ಖಾಕಿ ಸೈಲೆಂಟಾಗಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.




