ಜಿಲ್ಲಾ ಕಾರಾಗೃಹದಲ್ಲಿ ಸಸ್ಯ ನರ್ಸರಿ ವ್ಯವಸ್ಥೆ: ಜಿಲ್ಲಾಧಿಕಾರಿ

Share with

ಮಂಗಳೂರು: ನಗರದ ಜಿಲ್ಲಾ ಕಾರಾಗೃಹದಲ್ಲಿ ಸಸಿಗಳನ್ನು ಬೆಳೆಸಿ ಮಾರಾಟ ಮಾಡಲು ಅನುಕೂಲವಾಗುವಂತೆ ನರ್ಸರಿ ಸ್ಥಾಪಿಸಲು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ತಿಳಿಸಿದರು.

ಅವರು ಬುಧವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಜಿಲ್ಲಾ ಕಾರಾಗೃಹದಲ್ಲಿ ಆಯೋಜಿಸಲಾಗಿದ್ದ ಬಂಧಿನಿವಾಸಿಗಳ ಮನಪರಿವರ್ತನೆಗಾಗಿ “ಸಾಂಸ್ಕೃತಿಕ ಸೌರಭ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಜೈಲಿನಲ್ಲಿ ಖೈದಿಗಳೇ ವಿವಿಧ ರೀತಿಯ ಗಿಡ ಮರಗಳನ್ನು ಬೆಳೆಸಿ ಪೋಷಿಸಿಕೊಂಡು ಬಂದಿರುವುದು ಶ್ಲಾಘನೀಯವಾಗಿದೆ. ಸಾಕಷ್ಟು ತರಕಾರಿ, ಹಣ್ಣು, ಗಿಡ, ಮರಗಳು ಕಂಡುಬಂದಿದ್ದು, ಈ ನಿಟ್ಟಿನಲ್ಲಿ ಜೈಲು ಅಧಿಕಾರಿಗಳ ಪ್ರೋತ್ಸಾಹ ಮೆಚ್ಚುವಂತದ್ದು. ಇಲ್ಲಿ ನರ್ಸರಿ ಸ್ಥಾಪಿಸಿ, ಮರ-ಗಿಡಗಳ ಮಾರಾಟ ಮಾಡುವ ವ್ಯವಸ್ಥೆ ಕಲ್ಪಿಸಲಾಗುವುದು. ಇದಕ್ಕಾಗಿ ಸೂಕ್ತ ಸ್ಥಳಾವಕಾಶ ನೀಡಲು ಮಹಾನಗರಪಾಲಿಕೆಗೆ ಸೂಚಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶೋಭಾ ಬಿ.ಜಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಸಮಾರಂಭದಲ್ಲಿ ಪದ್ಮಶ್ರೀ ಹರೇಕಳ ಹಾಜಬ್ಬ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾರಾಗೃಹ ಅಧೀಕ್ಷಕ ಬಿ.ಟಿ. ಓಬಳೇಶಪ್ಪ, ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಶಾ, ಪತ್ರಕರ್ತ ಹರ್ಷ, ಕಾರಾಗೃಹ ಭದ್ರತಾ ಅಧಿಕಾರಿಗಳಾದ ಭರತ್ ನಾಯಕ್, ಸುಭಾಷ್ ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ. ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಸುಗಮ ಸಂಗೀತ, ನೃತ್ಯ, ಯಕ್ಷಗಾನ ಹಾಗೂ ಜಾನಪದ ಪ್ರದರ್ಶನಗಳನ್ನು ಏರ್ಪಡಿಸಲಾಗಿತ್ತು.


Share with

Leave a Reply

Your email address will not be published. Required fields are marked *