ಬಂಟ್ವಾಳ: ಅರಣ್ಯ ಪ್ರದೇಶ ಹೆಚ್ಚಳಕ್ಕಾಗಿ ಪ್ರತಿವರ್ಷ ಅರಣ್ಯ ಇಲಾಖೆಯಿಂದ 5 ಕೋಟಿ ಗಿಡಗಳ ನಾಟಿ ನಡೆಯುತ್ತಿದ್ದು, ಕಳೆದ ವರ್ಷ 5.43 ಕೋಟಿ ಗಿಡಗಳನ್ನು ನೆಡಲಾಗಿದೆ. ನಾಟಿಯಾದ ಗಿಡಗಳು ಸ್ಥಿತಿಯನ್ನು ಅರಿಯಲು ಮುಂದಿನ ದಿನಗಳಲ್ಲಿ ಆಡಿಟ್ ಮಾಡಲು ನಿರ್ಧರಿಸಲಾಗಿದೆ.ನೆಲ, ಜಲ, ಪ್ರಾಣಿ ಮತ್ತು ವನ ಸಂರಕ್ಷಣೆಯ ಕಾರ್ಯ ನಮ್ಮ ಸಂಕಲ್ಪವಾಗಬೇಕು ಪರಿಸರ ದಿನ, ವನಮಹೋತ್ಸವದ ದಿನದಂದು ಮಾತ್ರ ಸಸಿ ನೆಟ್ಟು, ನಮ್ಮ ಪರಿಸರ ಪ್ರೇಮ ಮೆರೆದರೆ ಸಾಲದು, ಅದು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಬೇಕು. ಪ್ರತಿಯೊಬ್ಬರೂ ತಮ್ಮ ಮನೆಯ ಮುಂದೆ ಒಂದು ಗಿಡ ನೆಟ್ಟು ಪೋಷಿಸಬೇಕು ಎಂದು ಹೇಳಿದರು.
ಕಳೆದ ಕೆಲವು ತಿಂಗಳುಗಳಲ್ಲಿ ಇಡೀ ಜಗತ್ತು ಬಿರು ಬಿಸಿಲಿನ ತಾಪದಿಂದ ತತ್ತರಿಸಿ ಹೋಯಿತು. ಭಾರತದಲ್ಲಿ ಈ ಬಾರಿ 40 ಸಾವಿರಕ್ಕೂ ಹೆಚ್ಚು ಜನರು ಸೌರಾಘಾತಕ್ಕೆ ಈಡಾಗಿದ್ದು, 100ಕ್ಕೂ ಹೆಚ್ಚು ಸಾವು ಸಂಭವಿಸಿವೆ. ಹಜ್ ಯಾತ್ರೆಗೆ ಹೋದ ಸಾವಿರಕ್ಕೂ ಹೆಚ್ಚು ಜನರು ಸೌರಶಾಖ ತಾಳಲಾರದೆ ನರಳಿ ಮೃತಪಟ್ಟಿದ್ದನ್ನು ನಾವು ಮಾಧ್ಯಮಗಳಲ್ಲಿ ನೋಡಿದ್ದೇವೆ ತಾಪಮಾನ ಏರಿಕೆ ತಡೆಯಲು ವೃಕ್ಷ ಸಂರಕ್ಷಣೆಯೇ ಪರಿಹಾರ ಎಂದರು.
ಅವರು ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾಮದ ಆಲಂಪುರಿ ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರಾಜ್ಯಾದ್ಯಂತ ಹಮ್ಮಿಕೊಂಡಿರುವ ದಶಲಕ್ಷ ಗಿಡಗಳ ನಾಟಿ ಕಾರ್ಯಕ್ರಮವನ್ನು ಅರಣ್ಯ ಇಲಾಖೆಯ ಸಹಕಾರದೊಂದಿಗೆ ಉದ್ಘಾಟಿಸಿ ಮಾತನಾಡಿದರು.
ಭೂ ಪ್ರದೇಶದಲ್ಲಿ 33 ಶೇ.ಅರಣ್ಯ ಇರಬೇಕಿದ್ದು, ಆದರೆ ರಾಜ್ಯದಲ್ಲಿ 21 ಶೇ.ಮಾತ್ರ ಇದೆ. ಹೀಗಾಗಿ ಹಸಿರು ಹೊದಿಕೆ ಹೆಚ್ಚಳ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪೂಜ್ಯ ಹೆಗ್ಗಡೆಯವರು ಗಿಡಗಳ ನಾಟಿಯ ಮೂಲಕ ನಾಡಿಗೆ ದೊಡ್ಡ ಕೊಡುಗೆ ನೀಡುತ್ತಿದ್ದಾರೆ. ಜತೆಗೆ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಹತ್ತು ಹಲವು ಸೇವಾ ಕಾರ್ಯಗಳು ಕೂಡ ನಡೆಯುತ್ತಿದೆ. ಎಂದರು
ಅಧ್ಯಕ್ಷತೆ ವಹಿಸಿದ್ದ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಮಾತನಾಡಿ, ಹೊಸ ಸಸಿ ನೆಡುವುದರ ಜೊತೆಗೆ ಇರುವ ವೃಕ್ಷಗಳ ಸಂರಕ್ಷಣೆಯನ್ನೂ ನಾವು ಮಾಡಬೇಕು. ಆಗ ಮಾತ್ರ ಹಸಿರು ಉಳಿಸಲು ಸಾಧ್ಯ ಎಂದರ ಪ್ರತಿಪಾದಿಸಿದರು. ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಈಗಾಗಲೇ ಲಕ್ಷಾಂತರ ಗಿಡಗಳ ನಾಟಿ ನಡೆದಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಗೇರು ಬೀಜ ಗಿಡಗಳನ್ನೂ ನೆಟ್ಟಿದ್ದೇವೆ. ಸುಮಾರು 600 ಕೆರೆಗಳ ಹೂಳೆತ್ತುವಿಕೆಯ ಜತೆಗೆ 100 ದಿನಗಳಲ್ಲಿ 100 ಕೆರೆಗಳ ಹೂಳು ತೆಗೆಯುವ ಕಾರ್ಯ ನಡೆದಿದೆ. ಎಲ್ಲಾ ಕಡೆ ಸಾಲು ಮರದ ತಿಮ್ಮಕ್ಕ ಅವರಿಗೆ ಸಮ್ಮಾನಗಳು ನಡೆದರೆ ಕ್ಷೇತ್ರದಿಂದ ಅವರ ಜೀವನೋಪಾಯಕ್ಕಾಗಿ ತಿಂಗಳಿಗೆ 7 ಸಾವಿರ ರೂ. ನೀಡಲಾಗುತ್ತಿದೆ. ಗಿಡನಾಟಿಯ ಕಾರ್ಯದಲ್ಲಿ ತೊಡಗಿರುವ ಎಲ್ಲಾ ಕಾರ್ಯಕರ್ತರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಸಸಿ ವಿತರಿಸಿ ಮಾತನಾಡಿ, ಅರಣ್ಯ ಇಲಾಖೆ ಮಾಡಬೇಕಾದ ಕಾರ್ಯವನ್ನು ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದ್ದು, 50 ಲಕ್ಷ ಮಂದಿಯ ದೊಡ್ಡ ತಂಡ ಈ ಕಾರ್ಯದಲ್ಲಿ ತೊಡಗಿದೆ ಎಂದರು.
ಸಮಾರಂಭದಲ್ಲಿ ಪುತ್ತೂರು ನರಿಮೊಗರಿನ ಅವಿನಾಶ್ ಕೊಡಂಕಿರಿ ಅವರಿಗೆ ಅರಣ್ಯ ಮಿತ್ರ ಪ್ರಶಸ್ತಿ ನೀಡಿ ಪುರಸ್ಕರಿಸಿದ ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ಸಾಲುಮರದ ತಿಮ್ಮಕ್ಕ ಹೆಸರಿನಲ್ಲಿ ಸರ್ಕಾರ ತಾಲೂಕಿಗೊಂದು ಸಸ್ಯೋದ್ಯಾನ ನಿರ್ಮಿಸುತ್ತಿದ್ದು, ಎಲ್ಲ ಊರಿನಲ್ಲೂ ಶುದ್ಧ ಗಾಳಿಗೆ ಒಂದು ನಿರ್ದಿಷ್ಟ ಸ್ಥಳ ಕಾಯ್ದಿರಿಸುತ್ತಿದೆ ಪ್ರಸ್ತುತ ಹವಾಮಾನ ಬದಲಾವಣೆ ಕುರಿತು ಚಿಂತನೆ ನಡೆಯಬೇಕಿದ್ದು, ಪರಿಸರ ಸಂರಕ್ಷಣಾ ಕೊರತೆಯಿಂದ ಭೂಮಿ ಸಮುದ್ರ ಪಾಲಾಗುತ್ತಿದೆ ಎಂದರು.
ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಕಮಲಾ ಕರಿಕಾಲನ್, ಅರಣ್ಯ ಇಲಾಖೆ ಮಂಗಳೂರು ವೃತ್ತ ಸಿಸಿಎಫ್ ಡಾ| ವಿ.ಕರಿಕಾಲನ್, ಮಂಗಳೂರು ವಿಭಾಗ ಡಿಸಿಎಫ್ ಆಂಟೋನಿ ಮರಿಯಪ್ಪ ವೈ.ಕೆ., ಮಂಗಳೂರು ಉಪವಿಭಾಗ ಎಸಿಎಫ್ ಪಿ.ಶ್ರೀಧರ್, ವನ್ಯಜೀವಿ ವಿಭಾಗದ ಶಿವರಾಮ ಬಾಬು, ಬಂಟ್ವಾಳ ವಲಯ ಅರಣ್ಯಾಧಿಕಾರಿ ಪ್ರಫುಲ್ ಶೆಟ್ಟಿ, ಕಾವಳಪಡೂರು ಪಂಚಾಯತ್ ಅಧ್ಯಕ್ಷ ಲಕ್ಷ್ಮೀನಾರಾಯಣ ಶರ್ಮ, ಜಿ.ಪಂ.ಮಾಜಿ ಸದಸ್ಯ ಬಿ.ಪದ್ಮಶೇಖರ್ ಜೈನ್, ಕಾರಿಂಜ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಯೋಜನೆಯ ಪ್ರಾದೇಶಿಕ ನಿರ್ದೇಶಕ ದುಗ್ಗೇ ಗೌಡ, ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್, ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ರೊನಾಲ್ಡ್ ಡಿಸೋಜ, ಬಂಟ್ವಾಳ ಕೇಂದ್ರ ಒಕ್ಕೂಟದ ಅಧ್ಯಕ್ಷ ಚಿದಾನಂದ ರೈ ಕಕ್ಯ, ಪ್ರಮುಖರಾದ ಶಾಂತಾರಾಮ ಪೈ, ಜಿನರಾಜ ಅರಿಗ, ಮನೋಜ್ ಮಿನೇಜಸ್ ಉಪಸ್ಥಿತರಿದ್ದರು.
ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್‌ಕುಮಾರ್ ಎಸ್.ಎಸ್.ಸ್ವಾಗತಿಸಿದರು. ಜನಜಾಗೃತಿ ವಿಭಾಗದ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ.ಪಾಯಿಸ್ ಪ್ರಶಸ್ತಿ ಪತ್ರ ವಾಚಿಸಿದರು. ಬಂಟ್ವಾಳ ಯೋಜನಾಧಿಕಾರಿ ಬಾಲಕೃಷ್ಣ ವಂದಿಸಿದರು. ಪ್ರಾದೇಶಿಕ ಯೋಜನಾಧಿಕಾರಿ ಗಣೇಶ್ ಪಿ.ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ನಂತರ ಅರಣ್ಯ ಸಚಿವ ಈಶ್ವರ ಖಂಡ್ರೆ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನ ವೀಕ್ಷಿಸಿ, ಅಲ್ಲಿರುವ ವೃಕ್ಷಗಳ ಮಾಹಿತಿ ಪಡೆದರು. ಸಸ್ಯೋದ್ಯಾನಗಳಿಗೆ ಬರುವ ಮಕ್ಕಳಿಗೆ, ಜನರಿಗೆ ಕನಿಷ್ಠ 10 ಗಿಡ ಮರಗಳನ್ನು ಗುರುತಿಸುವಂತೆ ಮಾಹಿತಿ ನೀಡಿ ಎಂದು ಸಲಹೆ ನೀಡಿದರು.