ಮಂಗಳೂರು: ಮಂಗಳೂರು-ಮಡಗಾಂವ್ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ವೀಡಿಯೊ ಲಿಂಕ್ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಡಿ.30ರಂದು ಚಾಲನೆ ಮಾಡಿದರು.


ಇದೇ ವೇಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಎರಡು ಅಮೃತ್ ಭಾರತ್ ರೈಲುಗಳು ಮತ್ತು ಮಂಗಳೂರು ಸೇರಿ ಆರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಚಾಲನೆ ನೀಡಿದರು. ಮಂಗಳೂರು ಮಡಂಗಾವ್ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಚಾಲನೆ ನೀಡಿದರು. ಮಂಗಳೂರಿನಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ರವರು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಚಾಲನೆ ನೀಡಿದ್ದಾರೆ.

ತಾತ್ಕಾಲಿಕ ವೇಳಾಪಟ್ಟಿಯಂತೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಮಂಗಳೂರು ಸೆಂಟ್ರಲ್ ನಿಂದ ಬೆಳಿಗ್ಗೆ 8:30ಕ್ಕೆ ನಿರ್ಗಮಿಸಿ, ಮಧ್ಯಾಹ್ನ 1:05 ಕ್ಕೆ ಮಡಗಾಂವ್ ಗೆ ತಲುಪುತ್ತದೆ. ಮಡಗಾಂವ್ ನಿಂದ ಸಂಜೆ 6:10ಕ್ಕೆ ಹೊರಟು, ರಾತ್ರಿ 10:45ಕ್ಕೆ ಮಂಗಳೂರು ಸೆಂಟ್ರಲ್ ನಿಲ್ದಾಣ ತಲುಪಲಿದೆ. ಮಂಗಳೂರು-ಮಡಗಾಂವ್ ವಂದೇ ಭಾರತ್ ರೈಲು ಮಂಗಳೂರು ಸೆಂಟ್ರಲ್ ಸ್ಟೇಷನ್ ನಲ್ಲಿ ನವೀಕರಿಸಿದ ಪಿಟ್ ಲೈನ್ ನಲ್ಲಿ ರಾತ್ರಿ ತಂಗಲಿದೆ.

ಇನ್ನು ಎಂಟು ಬೋಗಿಗಳ ಹವಾನಿಯಂತ್ರಿತ ವ್ಯವಸ್ಥೆಯ ವಂದೇ ಭಾರತ್ ರೈಲಿನಲ್ಲಿ ಏರ್ ಲೈನ್ ಮಾದರಿ ಸೀಟುಗಳ ಜೊತೆಗೆ ಎಕ್ಸಿಕ್ಯುಟಿವ್ ಚೇರ್ ಗಳ ವ್ಯವಸ್ಥೆ, ಆನ್ ಬೋರ್ಡ್ ಸಸ್ಯಹಾರಿ ಮತ್ತು ಮಾಂಸಹಾರಿ ಊಟದ ವ್ಯವಸ್ಥೆ, ಆನ್ಬೋರ್ಡ್ ವೈ-ಫೈ ಮತ್ತು ರೀಡಿಂಗ್ ಲೈಟ್ ಗಳ ಸೌಲಭ್ಯ, ಸ್ವಯಂಚಾಲಿತ ಬಾಗಿಲುಗಳು, ಸ್ಮೋಕ್ ಅಲರ್ಟ್, ಸಿಸಿಟಿವಿ ಕ್ಯಾಮೆರಾಗಳು, ಸೆನ್ಸಾರ್ ಆಧಾರಿತ ವಾಶ್ ಬೇಸಿನ್ ಸೌಲಭ್ಯಗಳಿವೆ.
ಇನ್ನು ಮಂಗಳೂರಿನಲ್ಲಿ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಚಾಲನೆ ನೀಡಿದ ಸಂದರ್ಭ ಶಾಸಕ ವೇದವ್ಯಾಸ ಕಾಮತ್, ಮ.ನಾ.ಪ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮತ್ತಿತರರು ಉಪಸ್ಥಿತರಿದ್ದರು.




